ADVERTISEMENT

ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಸಾತಿ ಸುಂದರೇಶ್‌

ಸಿಪಿಐ ಶತಮಾನೋತ್ಸವ ಸಮಾರಂಭದ ಬಹಿರಂಗ ಸಭೆ; ಸಾತಿ ಸುಂದರೇಶ್‌ ಕರೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:20 IST
Last Updated 10 ಡಿಸೆಂಬರ್ 2025, 6:20 IST
ಕಲಬುರಗಿಯ ಜಗತ್ ವೃತ್ತದ ಬಳಿ ಮಂಗಳವಾರ ಸಿಪಿಐ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ ಅವರು ಪೋಸ್ಟರ್‌ ಬಿಡುಗಡೆ ಮಾಡಿದರು      ಪ್ರಜಾವಾಣಿ ಚಿತ್ರ
ಕಲಬುರಗಿಯ ಜಗತ್ ವೃತ್ತದ ಬಳಿ ಮಂಗಳವಾರ ಸಿಪಿಐ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ ಅವರು ಪೋಸ್ಟರ್‌ ಬಿಡುಗಡೆ ಮಾಡಿದರು      ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಸಂವಿಧಾನ ಬದಲಾಯಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಅಜೆಂಡಾ ಆಗಿದ್ದು, ಅದಕ್ಕೆ ಅವಕಾಶ ಮಾಡಿಕೊಡದೆ ನಾವೆಲ್ಲ ಒಂದಾಗಿ ಸಂವಿಧಾನ ಉಳಿಸಲು ಹೋರಾಟ ರೂಪಿಸಬೇಕಾಗಿದೆ’ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು. 

ನಗರದ ಜಗತ್‌ ವೃತ್ತದ ಬಸವೇಶ್ವರ ಪುತ್ಥಳಿ ಹತ್ತಿರ ನಡೆದ ಸಿಪಿಐ ಶತಮಾನೋತ್ಸವ ಸಮಾರಂಭದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಸಮತಾ ರಾಜ್ಯದ ಕನಸುಗಳೊಂದಿಗೆ 1925ರಲ್ಲಿ ಜನ್ಮ ತಾಳಿದ ಸಿಪಿಐ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ಇದೀಗ ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ಹಾಗೂ ಶ್ರಮಿಕ ಕಾರ್ಮಿಕ, ರೈತ, ಬಡವರ ವಿರೋಧಿ ಸರ್ಕಾರಗಳ ವಿರುದ್ಧ ಹೋರಾಟ ಮಾಡಲಾಗುತ್ತಿದೆ’ ಎಂದರು.

‘ನಮ್ಮ ಪಕ್ಷದೊಂದಿಗೆ ನಾಗಪುರದಲ್ಲಿ ಜನ್ಮತಾಳಿದ ಆರ್‌ಎಸ್‌ಎಸ್ ದೇಶದಲ್ಲಿ ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ಆರ್‌ಎಸ್‌ಎಸ್‌ನ ಮುಖವಾಣಿಯಾಗಿರುವ ಬಿಜೆಪಿ, ವಿಎಚ್‌ಪಿ ಸಂಘ ಪರಿವಾರಗಳು ಸಂವಿಧಾನ ಬದಲಾಯಿಸಲು ಷಡ್ಯಂತ್ರ ಮಾಡುತ್ತಿವೆ. ಆರ್‌ಎಸ್‌ಎಸ್ ಹೇಳಿದಂತೆ ಬಿಜೆಪಿ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ’ ಎಂದರು.

‘ರಾಜ್ಯದಲ್ಲಿಯೇ ತಲಾ ಆದಾಯದಲ್ಲಿ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಈ ತಲಾ ಆದಾಯ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಕೃಷಿ ವಲಯ ಮತ್ತು ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಹೋರಾಟ ರೂಪಿಸಲು ನಾವೆಲ್ಲ ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಮಾತನಾಡಿ, ‘1925ರಲ್ಲಿ ಸ್ಥಾಪಿತವಾದ ಭಾರತ ಕಮ್ಯುನಿಸ್ಟ್‌ ಪಕ್ಷದ್ದು ತ್ಯಾಗ, ಬಲಿದಾನದಿಂದ ಕೂಡಿದ ಪಯಣವಾಗಿದ್ದು, ಸಮತಾ ರಾಜ್ಯದ ಕನಸು ನಮ್ಮದು. ಕೆಂಬಾವುಟ ಜನರ ಪರವಾಗಿ ಇದೆ. ಪ್ರಸ್ತುತ ದೇಶದಲ್ಲಿ ಮನೆ, ಮನಸ್ಸುಗಳನ್ನು ಒಡೆಯುವ ಕೆಲಸ ಆಗುತ್ತಿದೆ. ಹೀಗಾಗಿ ದುಡಿಯುವ ವರ್ಗ ಒಂದಾಗಬೇಕು. ದೇವರ ಹೆಸರಲ್ಲಿ ಜಗಳ ಹಚ್ಚುತ್ತಿದ್ದಾರೆ. ದೇವರು ಕಾಯಕದೊಳಗಿದ್ದಾನೆ ಎನ್ನುವುದನ್ನೇ ಮರೆತಿದ್ದಾರೆ. ಶ್ರಮಿಕರಿಗೆ ಬೆವರಿನ ಪಾಲು ಸಿಗಬೇಕು. ಸಿಪಿಐ ಪಕ್ಷಕ್ಕೆ ಬಲಪಡಿಸಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಪಿಐ ಹಿರಿಯ ಮುಖಂಡ ಪದ್ಮಾಕರ್‌ ಜಾನೀಬ್‌, ಎಸ್‌ಯುಸಿಐ ಮುಖಂಡ ಮಹೇಶ್‌ ಎಸ್‌.ಬಿ., ಮೌಲಾ ಮುಲ್ಲಾ, ಎಚ್‌.ಎಸ್‌.ಪತಕಿ, ಭೀಮಾಶಂಕರ ಮಾಡಿಯಾಳ, ಹಣಮಂತರಾಯ ಅಟ್ಟೂರ, ಸಾಜೀದ್‌ ಅಹ್ಮದ್‌ ಸೇರಿದಂತೆ ಹಲವರು ಹಾಜರಿದ್ದರು.

ಯಾರು ಏನು ಹೇಳಿದರು?

ಕೆಕೆಆರ್‌ಡಿಬಿಯಲ್ಲಿ ಹಣ ಲೂಟಿಯಾಗುತ್ತಿದೆ. ತೊಗರಿ ಮಂಡಳಿ ನಾಮ್‌ ಕೆ ವಾಸ್ತೆ ಆಗಿದೆ. ಶಿಕ್ಷಕರಿಲ್ಲದ ಶಾಲೆಗಳು, ಉಪನ್ಯಾಸಕರಿಲ್ಲದ ವಿಶ್ವವಿದ್ಯಾಲಯ. ನಿವೇಶನ, ಮನೆಗಳಿಲ್ಲದ ಕುಟುಂಬಗಳು ಕಲಬುರಗಿ ಜಿಲ್ಲೆಯ ಸ್ಥಿತಿಯಾಗಿದೆ

ಮಹೇಶ ರಾಠೋಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ

ಮೋದಿ ನೇತೃತ್ವದ ಬಿಜೆಪಿ ಆರ್‌ಎಸ್‌ಎಸ್ ನಿರ್ದೇಶನದಂತೆ ದೇಶದ ಸಂವಿಧಾನ ತಿದ್ದುಪಡಿ ಮಾಡುವ ಹುನ್ನಾರ ಮಾಡುತ್ತಿದೆ. ಕೋಮುವಾದ–ಎದುರಿಸಲು ನಾವೆಲ್ಲ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಾಗಿದೆ

ಕೆ.ಎಸ್.ಜನಾರ್ಧನ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ

ಪ್ರತಿರೋಧದ ಶಕ್ತಿಗಳು ಚೆಲ್ಲಾಪಿಲ್ಲಿಯಾಗಿವೆ. ಅವುಗಳೆಲ್ಲಾ ಒಂದೇ ವೇದಿಕೆಯಲ್ಲಿ ಬಂದಾಗ ಕೋಮುವಾದಿ ಶಕ್ತಿ ಅಡಗಿಸಲು ಸಾಧ್ಯ.

ಅರ್ಜುನ ಭದ್ರೆ, ಡಿಎಸ್‌ಎಸ್‌(ಕ್ರಾಂತಿಕಾರಿ) ರಾಜ್ಯ ಸಂಚಾಲಕ

ಸರ್ಕಾರಗಳು ಬಡವರನ್ನು ಕೊಲೆ ಮಾಡುತ್ತಿವೆ. ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಇದೆ.

ಪದ್ಮಾವತಿ ಮಾಲಿಪಾಟೀಲ್‌, ಎನ್‌ಎಫ್‌ಐಡಬ್ಲ್ಯೂ ಜಿಲ್ಲಾ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.