ADVERTISEMENT

ನಕಲು‌ ತಡೆ: ಪರೀಕ್ಷಾ ಮೇಲ್ವಿಚಾರಕರ‌ ಮೇಲೆ‌ ವಿದ್ಯಾರ್ಥಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 18:11 IST
Last Updated 20 ಫೆಬ್ರುವರಿ 2026, 18:11 IST
   

ಕಲಬುರಗಿ: ನಕಲು ಮಾಡುತ್ತಿರುವುದನ್ನು ತಡೆಯಲು ಮುಂದಾದ ಪರೀಕ್ಷಾ ಮೇಲ್ವಿಚಾರಕರೊಬ್ಬರ ಮೇಲೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ ಘಟನೆ ಕಲಬುರಗಿ ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದಿದೆ.

ಈ ಘಟನೆ ಪರೀಕ್ಷಾ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇತ್ತೀಚೆಗೆ ಪದವಿ ಅಂತಿಮ ವರ್ಷದ ‘ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ’ ವಿಷಯದ ಆಂತರಿಕ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್ ಮೊಬೈಲ್ ಫೋನ್ ಬಳಸಿ ನಕಲು ಮಾಡುತ್ತಿದ್ದ. ಅದನ್ನು ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಪ್ರಶ್ನಿಸಿ, ಉತ್ತರ ಪತ್ರಿಕೆ ವಶಕ್ಕೆ ಪಡೆದಿದ್ದಾರೆ. 

ADVERTISEMENT

ಬಳಿಕ ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಯು ಸಹಾಯಕ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ವಿದ್ಯಾರ್ಥಿ ಪರೀಕ್ಷಾ ಕೊಠಡಿಯಿಂದ ಹೊರ ಹೋಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

‘ಹಲ್ಲೆ ಘಟನೆ ಕುರಿತು ಆಂತರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ವರದಿಯನ್ನು ಕಾಲೇಜಿನ ಸೊಸೈಟಿ ಹಾಗೂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದಷ್ಟೇ ಪ್ರತಿಕ್ರಿಯಿಸಿರುವ ಕಾಲೇಜಿನ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.