ADVERTISEMENT

ಆಳಂದ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 2:54 IST
Last Updated 28 ಡಿಸೆಂಬರ್ 2021, 2:54 IST
ಆಳಂದದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೂಕ್ತ ಭದ್ರತೆ ಕಲ್ಪಿಸಲು ಒತ್ತಾಯಿಸಿ ಪಿಎಸ್ಐ ಮಹಾಂತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಆಳಂದದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೂಕ್ತ ಭದ್ರತೆ ಕಲ್ಪಿಸಲು ಒತ್ತಾಯಿಸಿ ಪಿಎಸ್ಐ ಮಹಾಂತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ಆಳಂದ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತರಗತಿಗಳು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡ ಘಟನೆ ನಡೆಯಿತು.

ಕಾಲೇಜುಗಳು ಆರಂಭವಾಗಿ 3 ತಿಂಗಳು ಕಳೆದರೂ ನಿಗದಿತವಾಗಿ ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿನಿಯರ ಶೌಚಾಲಯ ಅನಾನುಕೂಲಗಳು ಹಾಗೂ ಕೆಲ ಕಿಡಗೇಡಿಗಳ ಅನುಚಿತ ವರ್ತನೆಗಳಿಂದ ಬೇಸತ್ತು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರು. ವಿದ್ಯಾರ್ಥಿಗಳು ಕುಲಪತಿಗಳು ಹಾಗೂ ಪದವಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಗೊಳ್ಳಲು ಪಟ್ಟು ಹಿಡಿದರು.

ADVERTISEMENT

ವಿದ್ಯಾರ್ಥಿಗಳಾದ ಪಲ್ಲವಿ ಖಾನಾಪುರ, ಸಿದ್ದರಾಮ ಪೂಜಾರಿ, ಪೂಜಾ, ರೋಷನಿ ಮಾತನಾಡಿ ನಿಯಮಿತವಾಗಿ ತರಗತಿಗಳು ನಡೆಯುತ್ತಿಲ್ಲ, ಆಂತರಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸಿದರೂ ಸಮರ್ಪಕ ತರಗತಿಗಳು ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಿಡಿಗೇಡಿ ಗಳಿಂದ ನಿರಂತರ ಅನುಚಿತ ವರ್ತನೆ ಕಾಣುತ್ತಿದೆ ಎಂದು ಆಪಾದಿಸಿದರು.

ಪ್ರಾಚಾರ್ಯ ಸಿದ್ದಣ್ಣ ಪೂಜಾರಿ ಮಾತನಾಡಿ ಬೋಧಕರ ಕೊರತೆ ಹಾಗೂ ಕಾಲೇಜು ಸ್ವಂತ ಕಟ್ಟಡ ಇಲ್ಲದ ಕಾರಣ ಸಮಸ್ಯೆಗಳಿವೆ. ಕಾಲೇಜು ಆವರಣದಲ್ಲಿ ಕಿಡಿಗೇಡಿಗಳ ಉಪಟಳ ಜಾಸ್ತಿಯಾಗಿದೆ ಎಂದರು.

ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿವಿಧ ಸೆಮಿಸ್ಟರ್ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದರು. ನಂತರ ವಿದ್ಯಾರ್ಥಿಗಳು ಆಳಂದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಿಎಸ್ಐ, ಸಿಪಿಐ ಅವರಿಗೆ ಕಾಲೇಜಿಗೆ ಸೂಕ್ತ ಮನವಿ ಸಲ್ಲಿಸಿ ಕಾಲೇಜಿಗೆ ಸೂಕ್ತ ಭದ್ರತೆ ಒದುಗಿಸಲು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.