ಸೇಡಂ: ‘ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯೇ ಜಾಣ ಎಂಬ ಮನಸ್ಥಿತಿ ಮಕ್ಕಳಲ್ಲಿ ಮೂಡುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿದ್ಯಾರ್ಥಿಗಳಿಗೆ ಅಂಕದ ಜೊತೆಗೆ ಮೌಲ್ಯಯುತ ಶಿಕ್ಷಣ, ಸಂಸ್ಕಾರದ ಅವಶ್ಯಕತೆ ಇದೆ’ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಕೊತ್ತಲಬಸವೇಶ್ವರ ದೇವಾಲಯದ ನಾಗೇಂದ್ರ ಬ.ಪಾಟೀಲ ಆರೆಬೊಮ್ಮನಹಳ್ಳಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿಕ್ಷಕ ವೃತ್ತಿಯಲ್ಲಿರುವವರಿಗೆ ಹಣಕ್ಕಿಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಧ್ಯೇಯ ದೊಡ್ಡದಾಗಿರಬೇಕು. ಶಾಲೆಗಳು ಸಾಮಾಜಿಕ ಪರಿವರ್ತನೆ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಕೆಲಸ ನಿರ್ವಹಿಸಬೇಕಿದೆ’ ಎಂದರು.
ಇಸ್ರೊ ವಿಜ್ಞಾನಿ ಎಚ್.ಎನ್.ಸುರೇಶಕುಮಾರ ಮಾತನಾಡಿ, ‘ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯತ್ತ ಸಾಗುತ್ತಿದೆ. ಚಂದ್ರಯಾನ 3 ಭಾರತೀಯರ ಹೆಮ್ಮೆಯಾಗಿದೆ ಎಂದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವೈಜ್ಞಾನಿಕ ಗುಣ ಇರುತ್ತದೆ. ಅದನ್ನು ಹೆಕ್ಕಿ ತೆಗೆದು ಗುರುತಿಸುವ ಕೆಲಸ ಶಿಕ್ಷಕರಿಂದ ಸಮೃದ್ಧವಾಗಿ ಬೆಳೆಯಬೇಕಿದೆ’ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾನೇಹಿಗ ದಿನಚರಿ ಬಿಡುಗಡೆಗೊಳಿಸಲಾಯಿತು.
ವಿದ್ಯಾಭಾರತಿ ಜಿಲ್ಲಾ ಸಂರಕ್ಷಕ ಪಿ.ಭೀಮರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಮಾತನಾಡಿದರು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ, ವಿದ್ಯಾಭಾರತಿಯ ಹಿರಿಯ ಕಾರ್ಯಕರ್ತ ಜಿ.ಆರ್.ಜಗದೀಶ, ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಉಮೇಶಕುಮಾರ ಬೆಂಗಳೂರು ಇದ್ದರು.
ಶಾರದಾ ಸಂಗೀತ ಪಾಠ ಶಾಲೆಯ ಶಿಕ್ಷಕರು ಪ್ರಾರ್ಥಿಸಿದರು. ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಮಡಿವಾಳ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಹುಳಗೋಳ ನಿರೂಪಿಸಿದರು. ಗುಂಡಪ್ಪ ಕರೆಮನೋರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.