ADVERTISEMENT

ಕಲಬುರ್ಗಿ: ಪರೀಕ್ಷೆ ರದ್ದತಿಗೆ ವಿದ್ಯಾರ್ಥಿಗಳ ಒತ್ತಾಯ

ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 4:30 IST
Last Updated 14 ಜುಲೈ 2021, 4:30 IST
ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಗುಲಬರ್ಗಾ ವಿ.ವಿ. ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಗುಲಬರ್ಗಾ ವಿ.ವಿ. ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಡೆಮಾಕ್ರಟಿಕ್‌ ವಿದ್ಯಾರ್ಥಿಗಳ ಸಂಘಟನೆಯ (ಎಐಡಿಎಸ್‌ಒ) ಸದಸ್ಯರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಮುಖ್ಯದ್ವಾರದಿಂದ ಕಾರ್ಯಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಬಾರದು. ಎರಡು ಡೋಸ್ ಲಸಿಕೆ ನೀಡಿದ ಬಳಿಕವೇ ಆಫ್‌ಲೈನ್‌ ತರಗತಿ ಹಾಗೂ ಪರೀಕ್ಷೆ ನಡೆಸಬೇಕು ಎಂದು ಕುಲಪತಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸಂಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷಎಸ್.ಎಚ್.ಹಣಮಂತ ಮಾತನಾಡಿ, ‘ತಿಂಗಳಿಂದ ರಾಜ್ಯದಾದಂತ್ಯ ಸಾವಿರಾರು ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು 50 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೋಷಕರು, ಶಿಕ್ಷಕರು, ವೈದ್ಯರು, ಶಿಕ್ಷಣ ತಜ್ಞರೂ ಧ್ವನಿಗೂಡಿಸಿ 1ಲಕ್ಷಕ್ಕೂ ಹೆಚ್ಚು ಸಹಿ ಮಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ADVERTISEMENT

ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿಗಳ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ವಿಶ್ವವಿದ್ಯಾಲಯಗಳು ಸಹ ಮೌನವಾಗಿದ್ದು, ಪರೀಕ್ಷೆ ತಯಾರಿಯಲ್ಲಿ ಮುಳುಗಿವೆ. ವಿದ್ಯಾರ್ಥಿಗಳ ಜೀವಗಳನ್ನು ಲೆಕ್ಕಿಸದೇ ಪರೀಕ್ಷೆ ನಡೆಸಬಾರದು. ಕೂಡಲೇ ಹಿಂದಿನ 1, 3, ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಬೇಕು. ಮುಂದಿನ 2, 4, ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಎರಡು ಡೋಸ್ ಲಸಿಕೆ ನೀಡಿದ ಬಳಿಕ ನಡೆಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಇಸಬಾ, ಉಪಾಧ್ಯಕ್ಷ ಸ್ನೇಹಾ ಕಟ್ಟಿಮನಿ, ಸಮಿತಿ ಸದಸ್ಯರಾದ ಎನ್.ಕೆ ತುಳಜರಾಮ, ಗೌತಮ್, ಅರುಣ್, ರಮೇಶ, ಪ್ರೀತಿ, ಗೋಧಾವರಿ, ಶಿಲ್ಪಾ, ವೆಂಕಟೇಶ ದೇವದುರ್ಗಾ, ಭೀಮು ಆಂದೊಲ, ನಾಗರಾಜ ರಾವೂರ, ಸುನಿಲ ಪೂಜಾರಿ, ಖಲೀಲ್, ಅಕಾಶ, ಹರ್ಷ, ದೇವರಜ್, ಸಾಧನಾ, ಭಾಗ್ಯಶ್ರೀ, ಪವನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.