ADVERTISEMENT

ಹೂಗಳಿಂದ ಬದುಕು ಕಟ್ಟಿಕೊಂಡ ಬಸವರಾಜ

ಸಿನ್ನೂರು: ಹನಿ ನೀರಾವರಿ ಬಳಸಿ ಉತ್ತಮ ಆದಾಯ

ಶಿವಾನಂದ ಹಸರಗುಂಡಗಿ
Published 25 ಜನವರಿ 2020, 19:30 IST
Last Updated 25 ಜನವರಿ 2020, 19:30 IST
ಅಫಜಲಪುರ ಗಡಿ ಭಾಗದ ಮಹಾರಾಷ್ಟ್ರದ ಸಿನ್ನೂರ ಗ್ರಾಮದಲ್ಲಿ ಬಸವರಾಜ್ ರೋಡಗಿ ಒಂದೂವರೆ ಎಕರೆಯಲ್ಲಿ ಹೂವು ಬೇಸಾಯ ಮಾಡಿರುವುದು
ಅಫಜಲಪುರ ಗಡಿ ಭಾಗದ ಮಹಾರಾಷ್ಟ್ರದ ಸಿನ್ನೂರ ಗ್ರಾಮದಲ್ಲಿ ಬಸವರಾಜ್ ರೋಡಗಿ ಒಂದೂವರೆ ಎಕರೆಯಲ್ಲಿ ಹೂವು ಬೇಸಾಯ ಮಾಡಿರುವುದು   

ಅಫಜಲಪುರ: ಕಡಿಮೆ ನೀರಿನಲ್ಲಿ ಹನಿ ನೀರಾವರಿ ಬಳಸಿಕೊಂಡು ಒಂದೂವರೆ ಎಕರೆಯಲ್ಲಿ ಚೆಂಡು ಹೂವು ಬೆಳೆದು ₹ 3 ಲಕ್ಷ ಆದಾಯ ಪಡೆದಿದ್ದ ಸಿನ್ನೂರು ಗ್ರಾಮದ ಬಸವರಾಜ ರೋಡಗಿ ಅವರು ಒಂದೇ ವರ್ಷದಲ್ಲಿ ಹೂವು ಬೇಸಾಯದಲ್ಲಿ ಯಶಸ್ಸು ಕಂಡಿದ್ದಾರೆ.

ಪ್ರತಿ ವರ್ಷವೂ ಮಳೆ ಕಡಿಮೆ ಆಗುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರ ಪರಿಣಾಮ ರೈತರು ಹೆಚ್ಚು ನೀರು ಬೇಕಾಗುವ ಬಾಳೆ, ಕಬ್ಬು ಬೆಳೆಯುವುದು ಬಿಟ್ಟಿದ್ದಾರೆ. ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಕಡಿಮೆ ನೀರು ಬೇಕಾಗುವ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ, ಬಸವರಾಜ ರೋಡಗಿ ಒಂದೂವರೆ ಎಕರೆಯಲ್ಲಿ ಚೆಂಡು ಹೂವು ಬೆಳೆದು ಬಾಳೆ ಮತ್ತು ಕಬ್ಬಿನ ಬೆಳೆಗೆ ಬರುವ ಅದಕ್ಕಿಂತಲೂ ಹೆಚ್ಚಿನ ಆದಾಯ ಪಡೆದಿದ್ದಾರೆ.

‘ಹೂವು ಬೇಸಾಯಕ್ಕೆ ಹೆಚ್ಚಿನ ಯಾವುದೇ ರೋಗ ಬರುವುದಿಲ್ಲ. ಹೆಚ್ಚಿನ ಖರ್ಚು ಬರುವುದಿಲ್ಲ. ಕಡಿಮೆ ಖರ್ಚಿನಲ್ಲಿ ನಾವು ಹೂವು ಬೇಸಾಯ ಮಾಡಬಹುದು. ನಾನು ಒಂದೂವರೆ ಎಕರೆಯಲ್ಲಿ ಚೆಂಡು ಹೂವುಗಳು ಸಸಿ ನಾಟಿ ಮಾಡಿದ್ದೇನೆ. ಆರು ತಿಂಗಳಲ್ಲಿ ಹೂವು ಕಟಾವು ಬರುತ್ತದೆ ಮುಂದೆ ನಾವು ವಾರಕ್ಕೊಮ್ಮೆ ಹೂವುಗಳನ್ನು ಕಟಾವು ಮಾಡಬಹುದು’ ಎಂದು ಬಸವರಾಜ ರೋಡಗಿ ತಿಳಿಸಿದರು.

ADVERTISEMENT

‘ವಾರಕ್ಕೆ 30 ರಿಂದ 40 ಕ್ವಿಂಟಲ್‌ವರೆಗೆ ಹೂವು ಇಳುವರಿ ಬರುತ್ತದೆ. ಕಲಬುರ್ಗಿ ಮಾರುಕಟ್ಟೆಯಲ್ಲಿ ಮಾರುತ್ತೇನೆ. ಪ್ರತಿ ಕ್ವಿಂಟಲ್‌ಗೆ ₹ 3 ರಿಂದ 4 ಸಾವಿರವರೆಗೆ ಮಾರಾಟವಾಗುತ್ತದೆ. ಹಬ್ಬ, ಹರಿದಿನಗಳಲ್ಲಿ ಹೆಚ್ಚಿನ ಬೆಲೆಗೆ ಹೂವು ಮಾರಾಟವಾಗುತ್ತದೆ. ಒಂದೂವರೆ ಎಕರೆ ಹೂ ಬೆಳೆಯಲು ₹ 30 ಸಾವಿರ ಖರ್ಚು ಮಾಡಿದ್ದೇನೆ. ಹೀಗಾಗಿ ನನಗೆ ಹೆಚ್ಚಿನ ಆದಾಯ ಬಂದಿದೆ. ಕಬ್ಬು ಮತ್ತು ಬಾಳೆ ಬೆಳೆಗೆ ಖರ್ಚು ಹೆಚ್ಚಾಗುತ್ತದೆ. ಅದನ್ನು ಮಾರಲು ತೊಂದರೆ ಆಗುತ್ತದೆ. ಹೂವು ಬೇಸಾಯಕ್ಕೆ ಮಾರಾಟ ತೊಂದರೆ ಇಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.