ADVERTISEMENT

‘ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ’: ದಿವಾಕರ್

ವಿ.ಐ. ಲೆನಿನ್ 99ನೇ ಸ್ಮರಣ ದಿನದಲ್ಲಿ ದಿವಾಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 7:14 IST
Last Updated 22 ಜನವರಿ 2023, 7:14 IST
ಕಲಬುರಗಿಯ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ವಿ.ಐ. ಲೆನಿನ್ ಅವರ ಸ್ಮರಣ ದಿನವನ್ನು ಆಚರಿಸಲಾಯಿತು
ಕಲಬುರಗಿಯ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ವಿ.ಐ. ಲೆನಿನ್ ಅವರ ಸ್ಮರಣ ದಿನವನ್ನು ಆಚರಿಸಲಾಯಿತು   

ಕಲಬುರಗಿ: ’ಭಾರತಕ್ಕೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೊಂದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅಭಿಪ್ರಾಯಪಟ್ಟರು.

ರಷ್ಯನ್ ಸಮಾಜವಾದಿ ಕ್ರಾಂತಿಯ ರೂವಾರಿ ವಿ.ಐ. ಲೆನಿನ್ ಅವರ 99ನೇ ಸ್ಮರಣದಿನದ ಅಂಗವಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಪಂಚದ ಅತ್ಯಂತ ರೋಗಿಷ್ಟ ರಾಷ್ಟ್ರವಾದ ರಷ್ಯಾದಲ್ಲಿ ಝಾರ್‌ ದೊರೆಯ ಕ್ರೂರ ಆಳ್ವಿಕೆಯು ನಡೆಯುತ್ತಿತ್ತು. ದೇಶದಲ್ಲಿ ಜಮೀನ್ದಾರರ ಶೋಷಣೆ ಅಟ್ಟಹಾಸದಿಂದ ಮೆರೆದಿತ್ತು. ಅಂತಹ ಸಂದರ್ಭದಲ್ಲಿ ಕಾರ್ಮಿಕ ವರ್ಗಕ್ಕೆ ವಿಮೋಚನೆಯ ಚಿಂತನೆಯನ್ನು ಕೊಟ್ಟ ಮಹಾನ್ ತತ್ವಜ್ಞಾನಿಗಳಾದ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಎಂಗೆಲ್ಸ್ ಅವರ ಅಮೂಲ್ಯ ಬೋಧನೆಯನ್ನು ಅರ್ಥ ಮಾಡಿಕೊಂಡು, ಮಾರ್ಕ್ಸ್‌ವಾದ ಮಾತ್ರವೇ ವಿಶ್ವದ ಶೋಷಿತರ ವಿಮುಕ್ತಿಯನ್ನು ತೋರಿಸಿ ಕೊಡುವ ತತ್ವಶಾಸ್ತ್ರ ಎಂದು ಮನನ ಮಾಡಿಕೊಂಡರು. ನಂತರ ವಿಶ್ವದಲ್ಲಿ ಎಂದೂ ಕಂಡು ಕೇಳಿರದಂತಹ ಕಾರ್ಮಿಕರ ಶೋಷಣಾ ಮುಕ್ತ ಸಮಾಜವನ್ನು ಕಟ್ಟಿದರು. ಶತಶತಮಾನಗಳಿಂದಲೂ ಶೋಷಣೆಯ ಸಂಕೋಲೆಯಲ್ಲಿ ಇರುವ ಕಾರ್ಮಿಕ ವರ್ಗವು ಬಂಧಮುಕ್ತವಾಯಿತು. ಈ ಅಭೂತಪೂರ್ವ ಕ್ರಾಂತಿಯು 1917ರಲ್ಲಿ ನೆರವೇರಿ ನಂತರ ಸೋವಿಯತ್ ಒಕ್ಕೂಟ ಇಡೀ ವಿಶ್ವಕ್ಕೆ ಬಲಿಷ್ಠ ರಾಷ್ಟ್ರವಾಗಿ ಬೆಳೆಯಿತು’ ಎಂದರು.

ADVERTISEMENT

‘ಎಸ್‌ಯುಸಿಐ (ಸಿ) ಪಕ್ಷದ ಸಂಸ್ಥಾಪಕ ಶಿವದಾಸ ಘೋಷ್ ಅವರು ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಕನಸನ್ನು ನನಸು ಮಾಡಲು ಮಾರ್ಕ್ಸ್‌ವಾದ, ಲೆನಿನ್‌ವಾದವನ್ನು ಅನುಸರಿಸಬೇಕು ಎಂದು ತೋರಿಸಿಕೊಟ್ಟರು. ಪಕ್ಷವನ್ನು ಸಂಘಟಿಸಿ ದೇಶದಲ್ಲಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಬೇಕು. ಆಗ ಮಾತ್ರವೇ ಶೇ 99ರಷ್ಟು ಜನರನ್ನು ಕ್ರೂರವಾಗಿ ಶೋಷಣೆ ಮಾಡುತ್ತಿರುವ ಬಂಡವಾಳಶಾಹಿಗಳು ಹಾಗೂ ಅವರ ರಕ್ಷಣೆಗಾಗಿ ಏಜಂಟರಂತೆ ಇರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಸೋಲಿಸಿ ನವ ಸಮಾಜವನ್ನು ಕಟ್ಟಲು ಸಾಧ್ಯ’ ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾ ಸಮಿತಿಯ ಸದಸ್ಯೆ ವಿ. ನಾಗಮ್ಮಾಳ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಂ. ಶರ್ಮಾ, ಮಹೇಶ್ ಎಸ್.ಬಿ., ಸದಸ್ಯರಾದ ಗೌರಮ್ಮ ಸಿ.ಕೆ., ರಾಧಾ ಜಿ. ತುಳಜಾರಾಮ್, ಶಿಲ್ಪಾ ಬಿ.ಕೆ., ವೆಂಕಟೇಶ ದೇವದುರ್ಗ, ಗೋವಿಂದ್, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.