ADVERTISEMENT

ಕಬ್ಬು ದರ: ವಿವಿಧೆಡೆ ಬಂದ್, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 20:06 IST
Last Updated 7 ನವೆಂಬರ್ 2025, 20:06 IST
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಕ್ರಾಸ್‌ನಲ್ಲಿ ರೈತರು ರಸ್ತೆ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು 
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಕ್ರಾಸ್‌ನಲ್ಲಿ ರೈತರು ರಸ್ತೆ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು    

ಕಲಬುರಗಿ: ಟನ್‌ ಕಬ್ಬಿಗೆ ₹3,500 ದರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಹೋರಾಟ ಮುಂದುವರಿದಿದೆ.

ಮೈಸೂರು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ಹೋರಾಟ ಮುಂದುವರಿದಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ನೇತೃತ್ವದ ಹೋರಾಟ ಶುಕ್ರವಾರ ಮೂರು ದಿನ ಪೂರೈಸಿತು.

ADVERTISEMENT

ಮತ್ತೊಂದೆಡೆ ಯಡ್ರಾಮಿ ತಾಲ್ಲೂಕಿನ ಮಳ್ಳಿ–ನಾಗರಹಳ್ಳಿಯಲ್ಲಿರುವ ದಿ ಉಗರ್ ಶುಗರ್ ಕಾರ್ಖಾನೆ ಮುಂಭಾಗದಲ್ಲಿ ಶುಕ್ರವಾರ ರೈತರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ, ಬಿಸಿಲು ನಾಡಿನ ಹಸಿರು ಸೇನೆ, ಕರವೇ ಉತ್ತರ ಕರ್ನಾಟಕ ಘಟಕ (ಪ್ರವೀಣ ಶೆಟ್ಟಿ ಬಣ) ಮತ್ತು ಸಮಸ್ತ ಬೆಳೆಗಾರರ ಜಂಟಿ ಆಶ್ರಯದಲ್ಲಿ ಹೋರಾಟ ನಡೆಯುತ್ತಿದೆ.

ನೂರಾರು ರೈತರು ಪಟ್ಟಣದಿಂದ ಸಿಂದಗಿಗೆ ತೆರಳುವ ರಸ್ತೆ ಮೂರು ತಾಸು ಬಂದ್‌ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನಗಳ ಸವಾರರು, ಪ್ರಯಾಣಿಕರು ಪರದಾಡಿದರು.

ಹೋರಾಟಕ್ಕೆ ಮೈಸೂರಲ್ಲೂ ಬೆಂಬಲ

ಮೈಸೂರು: ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಮೈಸೂರು ಭಾಗದ ಜಿಲ್ಲೆಗಳ ರೈತರು ಶುಕ್ರವಾರ ಬೆಂಗಳೂರು –ಮಂಗಳೂರು ರಾಷ್ಟ್ರೀಯ ಹೆದ್ದಾರಿ– 275ರಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. 

ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು ಹಾಗೂ ಕೆ.ಆರ್‌.ನಗರ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು. ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟಿಸಿದರು.

ಬೆಳಗಾವಿ ಜನಪ್ರತಿನಿಧಿಗಳು ಮತ್ತು ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮುಖ್ಯಮಂತ್ರಿ ಮಣಿದಿದ್ದಾರೆ. ತಮ್ಮ ತಪ್ಪಿಗೆ ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ರಾಜಕೀಯ ಮಾಡುತ್ತಿದ್ದಾರೆ
ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

ಲೋಕಾಪುರ ಇಂಡಿ ಬಂದ್ ಯಶಸ್ವಿ

ಬಾಗಲಕೋಟೆ: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಜಿಲ್ಲೆಯ ಲೋಕಾಪುರ ಬಂದ್ ಯಶಸ್ವಿಯಾಯಿತು. ಜಿಲ್ಲೆಯಾದ್ಯಂತ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಅಂಗಡಿ ವಹಿವಾಟು ಬಂದ್ ಮಾಡಿದ್ದರು. ಪಟ್ಟಣ ಸ್ತಬ್ಧವಾಗಿತ್ತು. ಜಿಲ್ಲೆಯ ವಿವಿಧೆಡೆಯೂ ರಸ್ತೆ ತಡೆ ನಡೆಸಲಾಯಿತು.  ಇಂಡಿ ಬಂದ್‌: ವಿಜಯಪುರ ಜಿಲ್ಲೆಯ ವಿವಿಧೆಡೆ ರೈತರು ಧರಣಿ ಹೆದ್ದಾರಿ ತಡೆ ಇಂಡಿ ಪಟ್ಟಣ ಬಂದ್‌ ನಡೆಸಿದರು. ಇಂಡಿ ಪಟ್ಟಣ ಭಾಗಶಃ ಬಂದ್‌ ಆಗಿತ್ತು.  ಹೂವಿನಹಡಗಲಿ (ವಿಜಯನಗರ ಜಿಲ್ಲೆ): ರೈತರು ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್ ಕಾರ್ಖಾನೆಯನ್ನು ರೈತರು ಬಂದ್ ಮಾಡಿಸಿ ಪ್ರತಿಭಟಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.