ADVERTISEMENT

‘ಜಿಲ್ಲಾಧಿಕಾರಿ ಸೂಚನೆ ಪಾಲಿಸದ ಕಾರ್ಖಾನೆಗಳು’

ಮಾಜಿ ಶಾಸಕ ಬಿ.ಆರ್. ಪಾಟೀಲ, ಶಾಸಕ ಎಂ.ವೈ. ಪಾಟೀಲ ಜಂಟಿ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 6:06 IST
Last Updated 28 ನವೆಂಬರ್ 2020, 6:06 IST
ಬಿ.ಆರ್‌.ಪಾಟೀಲ
ಬಿ.ಆರ್‌.ಪಾಟೀಲ   

ಕಲಬುರ್ಗಿ: ರೈತರ ಕಬ್ಬಿಗೆ ಎಷ್ಟು ಬೆಲೆ ನೀಡಲಾಗುತ್ತದೆ ಎಂಬ ಬಗ್ಗೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿ ಅವರು ಸುಮಾರು 20 ದಿನಗಳ ಹಿಂದೆ ಸಭೆ ನಡೆಸಿ ಕಾರ್ಖಾನೆಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರೂ ಇನ್ನೂ ಪಾಲಿಸಿಲ್ಲ. ಅಂತಹ ಕಾರ್ಖಾನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಳಂದ ತಾಲ್ಲೂಕಿನ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ರೈತರಿಂದ ಪಡೆಯಲಾಗುವ ಕಬ್ಬಿಗೆ ಎಷ್ಟು ಬೆಲೆ ನಿಗದಿಪಡಿಸಲಾಗುತ್ತದೆ ಎಂಬುದನ್ನು ತಿಳಿಸುವುದಾಗಿ ಭರವಸೆ ನೀಡಿದ್ದರು. ಇನ್ನೂವರೆಗೂ ಬೆಲೆ ನಿಗದಿ ಮಾಡಿದ್ದನ್ನುರೈತರಿಗೆ ಹೇಳಿಲ್ಲ. ಕೇಂದ್ರ ಸರ್ಕಾರ ಎನ್‌ಎಸ್‌ಎಲ್ ಕಾರ್ಖಾನೆಗೆ 2756 ಎಫ್‌ಆರ್‌ಪಿ ದರವನ್ನು ನಿಗದಿ ಮಾಡಿದೆ. ಅದನ್ನು ರೈತರಿಗೆ ತಕ್ಷಣ ಬಿಡುಗಡೆ ಮಾಡಬೇಕು’ ಎಂದರು.

ಸರ್ಕಾರ ನಡೆಸುತ್ತಿರುವ ಸಕ್ಕರೆ ಲಾಬಿ: ಸರ್ಕಾರದ ನಿಯಮಗಳಿಗೆ ಕವಡೆ ಕಿಮ್ಮತ್ತನ್ನೂ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಮುಖ್ಯಮಂತ್ರಿಗಳಾಗಲೀ, ಸಕ್ಕರೆ ಸಚಿವರಾಗಲೀ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದನ್ನು ಗಮನಿಸಿದಾಗ ಸಕ್ಕರೆ ಕಾರ್ಖಾನೆ ಮಾಲೀಕರೇ ಸರ್ಕಾರ ನಡೆಸುತ್ತಿದ್ದಾರೇನೋ ಎಂಬ ಸಂಶಯ ಬರುತ್ತದೆ. ರಾಜ್ಯದಲ್ಲಿ ಸಕ್ಕರೆ ಲಾಬಿ ಅಷ್ಟೊಂದು ಪ್ರಬಲವಾಗಿದೆ ಎಂದು ಟೀಕಿಸಿದರು.

ADVERTISEMENT

ರೈತರು ಪೂರೈಸುವ ಕಬ್ಬಿನಿಂದ ಕಾರ್ಖಾನೆಗಳು ಬರೀ ಸಕ್ಕರೆಯನ್ನಷ್ಟೇ ಉತ್ಪಾದಿಸುವುದಿಲ್ಲ. ಸ್ಪಿರಿಟ್, ಕಾಕಂಬಿ, ಎಥೆನಾಲ್, ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸುತ್ತವೆ. ಆದರೆ, ರೈತರಿಗೆ ಮಾತ್ರ ಈ ಉತ್ಪನ್ನಗಳ ಆದಾಯವನ್ನು ವರ್ಗಾಯಿಸುವುದೇ ಇಲ್ಲ. ಅಲ್ಲದೇ ಕಳ್ಳದಾರಿಗಳ ಮೂಲಕ ಸಾಕಷ್ಟು ಹಣ ಮಾಡಿಕೊಳ್ಳುತ್ತಿವೆ. ಇಲ್ಲದಿದ್ದರೆ ನಷ್ಟದಲ್ಲಿ ನಡೆಯುತ್ತಿರುವ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಅಷ್ಟೊಂದು ಆಸಕ್ತಿ ವಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ದುಬಾರಿ ಬೆಲೆಗೆ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲು ಎಥೆನಾಲ್‌ ಅನ್ನು ಪರ್ಯಾಯ ಇಂಧನವಾಗಿ ಬಳಸಬಹುದು. ಆದರೆ, ಕೇಂದ್ರ ಸರ್ಕಾರವನ್ನು ನಿಯಂತ್ರಿಸುವ ಅಂತರರಾಷ್ಟ್ರೀಯ ತೈಲ ಲಾಬಿ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಟೀಕಿಸಿದರು.

ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ನಿರ್ದೇಶಕ ಧರ್ಮರಾಜ ಸಾಹು, ನಾಗರಾಜ ಕೋರಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.