ADVERTISEMENT

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ: ಬಿಆರ್‌ಪಿ ಬಣಕ್ಕೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:25 IST
Last Updated 18 ಡಿಸೆಂಬರ್ 2025, 4:25 IST
ಕಲಬುರಗಿಯ ಕೃಷಿ ಕಾಲೇಜು ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು
ಕಲಬುರಗಿಯ ಕೃಷಿ ಕಾಲೇಜು ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು   

ಕಲಬುರಗಿ: ಜಿಲ್ಲೆಯ ಗಮನ ಸೆಳೆದಿದ್ದ ಭೂಸನೂರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶಾಸಕ ಬಿ.ಆರ್‌.ಪಾಟೀಲ ಬೆಂಬಲಿತ ಪೆನಲ್‌ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದೆ.

14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ.ಆರ್‌.ಪಾಟೀಲ ಬಣದ 13 ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಬೆಂಬಲಿತ ಬಣಕ್ಕೆ ತೀವ್ರ ಮುಖಭಂಗವಾಗಿದ್ದು, ಕೇವಲ ಒಂದು ಸ್ಥಾನ ಗೆದ್ದಿದೆ. ಸುಭಾಷ ಗುತ್ತೇದಾರ ಅವರ ಅಳಿಯ ಅಶೋಕ ಗುತ್ತೇದಾರ 22 ಮತಗಳ ಅಂತರದಿಂದ ವಿಜಯದ ನಗೆ ಬೀರಿದ್ದಾರೆ.

ನಗರದ ರಾಣೇಶ ಪೀರ್‌ ದರ್ಗಾ ಸಮೀಪದ ಸರ್ಕಾರಿ ಕೃಷಿ ಕಾಲೇಜು ಆವರಣದಲ್ಲಿ ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು.

ADVERTISEMENT

28 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 1,393 ಮತದಾರರ ಪೈಕಿ 1,194 ಮತದಾರರು ತಮ್ಮ ಮತಹಕ್ಕು ಚಲಾಯಿಸಿದರು. ಮತದಾನ ಬಳಿಕ ಮತ ಎಣಿಕೆ ನಡೆಯಿತು.

ಗೆದ್ದವರ ವಿವರ: ‘ಅ’ ವರ್ಗದ ಸಾಮಾನ್ಯ ಕ್ಷೇತ್ರದಿಂದ ಧಂಗಾಪುರದ ಗುರುಲಿಂಗಜಂಗಮ ಮಾಲೀಪಾಟೀಲ, ಭೂಸನೂರಿನ ಧರ್ಮರಾಜ ಸಾಹು, ದಣ್ಣೂರಿನ ಚನ್ನಬಸಪ್ಪ ಮಾಲೀಪಾಟೀಲ, ಆಳಂದದ ಶ್ರೀಶೈಲ ಹತ್ತರಕಿ, ಬೆಳಮಗಿಯ ಸುಭಾಷ ಮುರುಡ, ಹೊದಲೂರಿನ ಶಾಂತೇಶ್ವರ ಪಾಟೀಲ ಗೆಲುವಿನ ನಗೆ ಬೀರಿದ್ದಾರೆ.

ಹಿಂದುಳಿದ ‘ಅ’ ವರ್ಗ ಕ್ಷೇತ್ರದಿಂದ ಭೂಸನೂರಿನ ಅಶೋಕ ಗುತ್ತೇದಾರ, ಹಿಂದುಳಿದ ‘ಬ’ ವರ್ಗದಿಂದ ಕೊರಳ್ಳಿಯ ಗುರುಪ್ರಸಾದ ಪಾಟೀಲ, ಮಹಿಳಾ ‘ಅ’ ವರ್ಗದಿಂದ ಭೂಸನೂರಿನ ಕವಿತಾ ಗೊಬ್ಬೂರ ಹಾಗೂ ಬೊಮ್ಮನಳ್ಳಿಯ ರತ್ನಾಬಾಯಿ ಪಾಟೀಲ, ಪರಿಶಿಷ್ಟ ಜಾತಿ ‘ಅ’ ವರ್ಗದಿಂದ ಹಸರಗುಂಡಗಿಯ ಸಿದ್ದರಾಮ ಸಾಲಿಮನಿ, ಪರಿಶಿಷ್ಟ ಪಂಗಡ ‘ಅ’ ವರ್ಗದಿಂದ ಭೂಸನೂರಿನ ಸಾತಪ್ಪ ತಳವಾರ, ‘ಡ’ ವರ್ಗದ ಸಂಘ ಸಂಸ್ಥೆ ಕ್ಷೇತ್ರದಿಂದ ಭೂಸನೂರಿನ ಸಿದ್ದಮ್ಮ ಮೈನಾಳ, ‘ಬ’ ವರ್ಗದ ಕಬ್ಬು ಬೆಳೆಗಾರರಲ್ಲದ ಕ್ಷೇತ್ರದಿಂದ ಸರಸಂಬಾದ ಮಾಣಿಕ ಮಾಡ್ಯಾಳೆ ಗೆದ್ದಿದ್ದಾರೆ.

ವಿಜಯೋತ್ಸವ: ಸುಲಭ ಗೆಲುವಿನ ಬೆನ್ನಲ್ಲೆ ವಿಜಯಶಾಲಿಯಾದ ಅಭ್ಯರ್ಥಿಗಳು, ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. 

ಭದ್ರತೆ: ಡಿಸೆಂಬರ್‌ 3ರಂದು ಕಲಬುರಗಿಯ ವಿಶ್ವರಾಧ್ಯ ದೇವಸ್ಥಾನದ ಆವರಣದಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮುಂದೂಡಲಾಗಿತ್ತು, ಬುಧವಾರ ಮತ್ತೊಮ್ಮೆ ಚುನಾವಣೆ ನಡೆಯಿತು. ಈ ಸಲ ಬಿಗಿಪೊಲೀಸ್‌ ಬಂದೋಬಸ್ತ್‌ಗೆ ಮಾಡಲಾಗಿತ್ತು.

ಮೂರು ಹಂತದ ತಪಾಸಣೆ ನಡೆಸಿ ಅಭ್ಯರ್ಥಿಗಳು, ಮತದಾರರು ಹಾಗೂ ಚುನಾವಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಮತಕೇಂದ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್‌ ಹಾಗೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಚುನಾವಣೆ ಸುಗಮವಾಗಿ ನಡೆಸಲಾಗಿದೆ
-ಕಿಶೋರ ಪಾಟೀಲ, ಸಹಾಯಕ ಚುನಾವಣಾಧಿಕಾರಿ