
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಕಬ್ಬು ಬೆಳೆಗಾರರ ಸಂಘದ ಸದಸ್ಯರು ರೈತ ಮುಖಂಡ ಚೂನಪ್ಪ ಪೂಜಾರಿ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,165 ದರ ಕೊಡಲೇಬೇಕು’ ಎಂದು ಕಬ್ಬು ಬೆಳೆಗಾರರ ಪರ ಹೋರಾಟಗಾರ, ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಭೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ರಿಕವರಿ ಆಧಾರಿತ ಎಫ್ಆರ್‌ಪಿಯನ್ನು ನಾವು ಎಂದಿಗೂ ಒಪ್ಪಿಲ್ಲ, ಈಗಲೂ ಒಪ್ಪಲ್ಲ. ಬೆಳಗಾವಿಯಲ್ಲೂ ಎಫ್‌ಆರ್‌ಪಿ ದರಕ್ಕಿಂತಲೂ ಹೆಚ್ಚಿನ ದರವನ್ನೇ ನಾವು ತೆಗೆದುಕೊಳ್ಳುತ್ತಿದ್ದೇವೆ. ಅದರಂತೆ ಕಲಬುರಗಿಯಲ್ಲೂ ಸಕ್ಕರೆ ಕಾರ್ಖಾನೆಗಳು ಸಕ್ಕರೆ ರಿಕವರಿಯ ನೆಪ ಹೇಳದೇ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,165 ಕೊಡಬೇಕು. ಇಲ್ಲದಿದ್ದರೆ ರೈತರು ಅಂಥ ಕಾರ್ಖಾನೆಗಳಿಗೆ ಕಬ್ಬನ್ನೇ ಕೊಡಲ್ಲ’ ಎಂದರು.
‘ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಸೇರಿ ಕಬ್ಬು ಬೆಳೆಗಾರರ ಹಿತಾಸಕ್ತಿ ರಕ್ಷಿಸಬೇಕು. ಬೆಳಗಾವಿಯ ಗುರ್ಲಾಪುರದಲ್ಲಿ ನಡೆದ ಐತಿಹಾಸಿಕ ಹೋರಾಟದ ಫಲವಾಗಿ ಐದಾರು ವರ್ಷಗಳ ಬಳಿಕ ಪ್ರತಿ ಟನ್ ಕಬ್ಬಿಗೆ ಒಂದಿಷ್ಟು ದರ ಸಿಕ್ಕಿದೆ. ಆದರೆ, ಈ ಹೋರಾಟ ಇಲ್ಲಿಗೇ ಸೀಮಿತವಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ 10 ಲಕ್ಷದಷ್ಟು ಕಬ್ಬು ಬೆಳೆಗಾರರು ಸೇರಿ ಕಬ್ಬಿಗೆ ಇನ್ನಷ್ಟು ಉತ್ತಮ ದರ ಪಡೆಯಲು ಯತ್ನಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಚೂನಪ್ಪ ಪೂಜಾರಿ ಅವರನ್ನು ರೈತ ಮುಖಂಡರು ಶಾಲು ಹೊದಿಸಿ ಸತ್ಕರಿಸಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ರಾಮ ದಣ್ಣೂರ, ಅಫಜಲಪುರ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹೂಗಾರ, ಪ್ರಧಾನ ಕಾರ್ಯದರ್ಶಿ ಶರಣಗೌಡ ಮಾಲಿಪಾಟೀಲ, ಆನಂದ ದೇಸಾಯಿ ಜೇರಟಗಿ, ವಿಜಯಕುಮಾರ ಪಾಟೀಲ ಅರ್ಜುನಗಿ, ವೀರೇಶ ದೇಸಾಯಿ, ಶರಣಗೌಡ ಪಾಟೀಲ, ಸಂತೋಷ ತಳವಾರ ಕಲ್ಲೂರ, ಬೈಲಪ್ಪ ಸಣ್ಣಮನಿ ಜೋಗುರು, ಸಿದ್ದನಗೌಡ ಪಾಟೀಲ ಹೇರೂರ, ಬಸವರಾಜ ಪಾಟೀಲ ಹೇರೂರ, ಶಿವರಾಯಗೌಡ ಪಾಟೀಲ ಬಸವಪಟ್ಟಣ, ಚಂದ್ರಕಾಂತ ಪೂಜಾರಿ ಹಾವನೂರ, ಅರ್ಜುಣಗಿ, ಹಾಗರಗುಂಡಗಿ, ಔರಾದ್(ಬಿ), ಇಂಗಳಗಿ (ಬಿ), ಘತ್ತರಗಿ, ಇಂಚಗೇರಿ, ಕೆಲ್ಲೂರು, ಗಾನಗಾಪುರ, ಗರೂರ (ಬಿ) ಸೇರಿದಂತೆ ಹಲವೆಡೆಯ ನೂರಾರು ರೈತರು ಪಾಲ್ಗೊಂಡಿದ್ದರು.
ಅಧಿಕಾರಿಗಳ ಜೊತೆಗೆ ಸಭೆ
ಚೂನಪ್ಪ ಪೂಜಾರಿ ಸೇರಿದಂತೆ ಕಬ್ಬು ಬೆಳೆಗಾರರ ಸಂಘದ ಮುಖಂಡರು ನೂರಾರು ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಅವರೊಂದಿಗೆ ಸಭೆ ನಡೆಸಿ ಕಬ್ಬಿನ ದರ ಕುರಿತು ಚರ್ಚಿಸಿದರು. ‘ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಟನ್ ಕಬ್ಬಿಗೆ ₹3165 ದರ ನೀಡಲು ಮೂರು ಸಕ್ಕರೆ ಕಾರ್ಖಾನೆಗಳು ಸಮ್ಮತಿಸಿವೆ. ಇನ್ನೆರಡು ಕಾರ್ಖಾನೆಗಳನ್ನೂ ಒಪ್ಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.