ADVERTISEMENT

ಕಲಬುರಗಿ | ಕಬ್ಬಿನ ಇಳುವರಿ: ಸಮಿತಿ ರಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:59 IST
Last Updated 21 ನವೆಂಬರ್ 2025, 6:59 IST
ಚಂದ್ರಶೇಖರ ಎಸ್‌.ಹಿರೇಮಠ
ಚಂದ್ರಶೇಖರ ಎಸ್‌.ಹಿರೇಮಠ   

ಕಲಬುರಗಿ: ‘ಕಬ್ಬಿನ ಇಳುವರಿ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರೈತರನ್ನೊಳಗೊಂಡ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಎಸ್‌.ಹಿರೇಮಠ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಕಟಾವು ಮತ್ತು ಸಾಗಾಣಿಕೆ ಸಂದರ್ಭದಲ್ಲಿ ಕಾರ್ಖಾನೆಯ ಕಾರ್ಮಿಕರು ರೈತರ ಬಳಿ ಹಣ ಮತ್ತಿತರ ಬೇಡಿಕೆ ಇಡುತ್ತಿದ್ದಾರೆ. ಇದನ್ನು ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ಪ್ರಕ್ರಿಯೆ ಪೂರ್ಣವಾದ ಮೇಲೆ ರೈತರಿಗೆ ಹಣ ಕೊಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಟನ್‌ ಕಬ್ಬಿಗೆ ಸರ್ಕಾರದ ಆದೇಶದಂತೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ₹3,300 ಕೊಡಬೇಕು ಎಂದು ಆಗ್ರಹಿಸಿ ಭೂಸನೂರದಲ್ಲಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ನ.17ರಂದು ರೈತರ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬೇಡಿಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತನಾಡಿದಾಗ ಅವರು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅದರಂತೆ ಭೇಟಿಯಾಗಿ ಸಭೆ ನಡೆಸಿದ್ದು, ಸಮಿತಿ ರಚನೆ ಮತ್ತು ಕಬ್ಬು ಕಟಾವು ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದಾರೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಬಿಸಿಲು ಹೆಚ್ಚು ಇರುವುದರಿಂದ ಬೆಳಗಾವಿ ಮತ್ತು ಬಾಗಲಕೋಟೆಗಿಂತಲೂ ಇಲ್ಲಿ ಸಕ್ಕರೆ ಇಳುವರಿ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ, ಟನ್‌ ಕಬ್ಬಿಗೆ ₹3,300 ನಿಗದಿಪಡಿಸುವಂತೆ ಸುದೀರ್ಘವಾಗಿ ಚರ್ಚಿಸಿದಾಗ ಈ ಕುರಿತು ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಯವರನ್ನು ಮತ್ತೊಮ್ಮೆ ಕರೆಸಿ ಮಾತುಕತೆ ನಡೆಸುವುದಾಗಿ ಡಿ.ಸಿ ತಿಳಿಸಿದ್ದಾರೆ. 2–3 ದಿನಗಳಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದಲ್ಲಿ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಭೀಮಶೆಟ್ಟಿ ಮುಕ್ಕಾ, ಗಿರೀಶಗೌಡ ಬಿ.ಇನಾಮದಾರ, ಅಣವೀರ ಪಾಟೀಲ, ಶಿವಲಿಂಗಪ್ಪ ಟೆಂಗಳಿ, ರಾಜು ಜೈನ್‌, ಅಶ್ವಿನ್‌ಕುಮಾರ ಟೆಂಗಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.