ADVERTISEMENT

ಸುಡುವ ಬಿಸಿಲು; ಬಸವಳಿದ ಜನರು

ನೀರು ಕುಡಿಯಲು ನೀರಡಿಕೆ ಆಗುವವರೆಗೂ ಕಾಯಬೇಡಿ: ವೈದ್ಯರ ಸಲಹೆ

ಸಂತೋಷ ಈ.ಚಿನಗುಡಿ
Published 2 ಏಪ್ರಿಲ್ 2022, 2:21 IST
Last Updated 2 ಏಪ್ರಿಲ್ 2022, 2:21 IST
ಡಾ.ಜಹೀರ್‌ ಅಹಮದ್
ಡಾ.ಜಹೀರ್‌ ಅಹಮದ್   

ಕಲಬುರಗಿ: ಮಾರ್ಚ್‌ ಕೊನೆಯ ವಾರದಿಂದಲೇ ಏರುಗತಿಯಲ್ಲಿ ಸಾಗಿದ ಜಿಲ್ಲೆಯ ತಾಪಮಾನ, ಏಪ್ರಿಲ್‌ 1ಕ್ಕೆ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಇನ್ನೊಂದೆಡೆ ಕನಿಷ್ಠ ತಾಪಮಾನ ಕೂಡ 25.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹಗಲು, ರಾತ್ರಿ ನಿರಂತರವಾಗಿ ಬಿಸಿಗಾಳಿ ಬೀಸುತ್ತಿರುವ ಕಾರಣ ಜನ ಹೈರಾಣಾಗಿದ್ದಾರೆ.

ಕಳೆದ ವರ್ಷ (2021) ಏಪ್ರಿಲ್‌ 1ರಂದು ಕೂಡ ಗರಿಷ್ಠ ತಾಪಮಾನ 41.6 ಡಿಗ್ರಿ ಇತ್ತು. ಆದರೆ, ಕನಿಷ್ಠ ತಾಪಮಾನ 22.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಗರಿಷ್ಠ ತಾಪಮಾನದಲ್ಲಿ ಈ ಬಾರಿ ಕೂಡ ವಾಡಿಕೆ ಪ್ರಮಾಣವೇ ಮುಂದುವರಿದಿದೆ. ಆದರೆ, 22 ಡಿಗ್ರಿ ಇರಬೇಕಿದ್ದ ಕನಿಷ್ಠ ತಾಪಮಾನ ಮಾತ್ರ 25 ಡಿಗ್ರಿಗೆ ಹೆಚ್ಚಳ ಕಂಡಿದೆ. ಹೀಗಾಗಿ, ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಬಿಸಿಗಾಳಿಯ ತಾಪ ಎಲ್ಲರಿಗೂ ತಟ್ಟುತ್ತಿದೆ.

ಹವಾಮಾನ ಲೆಕ್ಕಾಚಾರದ ಪ್ರಕಾರ, ಪ್ರತಿ ವರ್ಷದ ಮಾರ್ಚ್‌ 11ಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಬೇಸಿಗೆ ಅನುಭವ ಶುರುವಾಗುತ್ತದೆ. ಮಾರ್ಚ್‌ ಕೊನೆಯ ವಾರದವರೆಗೂ 40 ಡಿಗ್ರಿ ಒಳಗೇ ದಾಖಲಾಗಬೇಕಿದ್ದ ಉಷ್ಣಾಂಶ ಈ ವರ್ಷ ಅದನ್ನು ಮೀರಿದೆ. ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆ ಸುರಿದಿದ್ದು ಹಾಗೂ ಲಾಕ್‌ಡೌನ್‌ ಕಾರಣ ವಾಹನಗಳ ಬಳಕೆ ನಿಂತಿದ್ದರಿಂದ ಧಗೆ ತುಸು ಕಡಿಮೆಯಾಗಿತ್ತು. ಆದರೆ, ಈ ಬಾರಿ ಮತ್ತೆ ಮಾನವ ಚಟುವಟಿಕೆಗಳು ಹೆಚ್ಚಾಗಿದ್ದರಿಂದ ಸಹಜವಾಗಿಯೇ ಹಳೆಯ ದಿನಗಳು ಮರಳುತ್ತವೆ ಎನ್ನುವುದು ಹವಾಮಾನ ತಜ್ಞರ ಅಭಿಮತ.

ADVERTISEMENT

‘ಉತ್ತರದ ಕಡೆಯಿಂದ ಬಿಸಿಗಾಳಿ ಅತಿ ವೇಗವಾಗಿ ಬೀಸುವ ಕಾರಣ ದಕ್ಷಿಣ ಭಾಗದ ಒಣಪ್ರದೇಶಗಳ ಮೇಲೆ ಇಂಥ ಧಗೆಯ ಪರಿಣಾಮ ಉಂಟಾಗುತ್ತದೆ. ಬಿಸಿಲು ಕಡಿಮೆ ಇದ್ದರೂ ಬಿಸಿಗಾಳಿಯಿಂದಾಗಿ ಅದರ ಪ್ರಖರತೆ ಹೆಚ್ಚು ಅನುಭವವಾಗುತ್ತದೆ. ಈ ಭಾಗದ ಪ್ರದೇಶ ಹೆಚ್ಚು ಕಲ್ಲಿನಿಂದ ಕೂಡಿದ್ದರಿಂದ ಹಗಲು ಬಿಸಿಲಿನಿಂದ ಕಾದ ಭೂಮಿಯು ರಾತ್ರಿ ಅದರ ಉಷ್ಣಾಂಶವನ್ನು ಹೊರಗೆ ಹಾಕುತ್ತದೆ. ಹೀಗಾಗಿ, ರಾತ್ರಿ ಗಾಳಿಯೂ ಬಿಸಿಯಾಗಿರುತ್ತದೆ’ ಎಂದು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಡಾ.ಜಹೀರ್‌ ಅಹ್ಮದ್‌ ತಿಳಿಸಿದ್ದಾರೆ.

ಪರೀಕ್ಷೆ ಬರೆಯಲೂ ಸಂಕಷ್ಟ: ಸದ್ಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು ಬಿಸಿಲ ಧಗೆಯಿಂದ ವಿದ್ಯಾರ್ಥಿಗಳು ಬಳಲುವಂತಾಗಿದೆ. ಇಳಿಸಂಜೆ ಹಾಗೂ ತಡರಾತ್ರಿ ಕೂಡ ಬಿಸಿಗಾಳಿ ಬೀಸುವ ಕಾರಣ ಓದುವುದಕ್ಕೂ ಅಡಚಣೆಯಾಗಿದೆ. ಮೇಲಾಗಿ,ಏಪ್ರಿಲ್‌ ಮೂರನೇ ವಾರದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಆಗ ಗರಿಷ್ಠ ತಾಪಮಾನ 44 ಡಿಗ್ರಿ ತಲುಪುವ ಕಾರಣ ವಿದ್ಯಾರ್ಥಿಗಳಿಗೆ ಸುಸ್ತು ತಪ್ಪಿದ್ದಲ್ಲ.ಉರಿಬಿಸಿಲು, ಬಿಸಿಗಾಳಿಯ ಮಧ್ಯೆ ವಿದ್ಯಾರ್ಥಿಗಳು– ಬೋಧಕರು ಪರದಾಡುವುದು ಪ್ರತಿ ವರ್ಷ ನಡೆದೇ ಇದೆ. ಹಾಗಾಗಿ, ಕನಿಷ್ಠ ಪರೀಕ್ಷಾ ಕೊಠಡಿಗಳಲ್ಲಾದರೂ ಏರ್‌ಕೂಲರ್‌ ವ್ಯವಸ್ಥೆ ಮಾಡಬೇಕು ಎನ್ನುವುದು ಅಶ್ವಿನಿ ವಡ್ಲಿ, ರಾಜಶ್ರೀ ವಡ್ಲಿ, ಬಸು ಡಿಗ್ಗಾಂವ, ಉಮೇಶ ಹಾದಿಮನಿ ಅವರ ಆಗ್ರಹ.

ಬೇಡಿಕೆಗೆ ಸಾಧ್ಯವಾದಷ್ಟು ಬೇಗ ಸ್ಪಂದಿಸಬೇಕೆಂದು ಕೋರಿದ್ದಾರೆ.

*

ಬೇಸಿಗೆ: ಮಜ್ಜಿಗೆ, ಎಳನೀರು ಕುಡಿಯಿರಿ

lಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಿ. ಬಿಳಿ ಬಟ್ಟೆ ಇನ್ನೂ ಉತ್ತಮ

lಹಣ್ಣಿನ ರಸ, ಪಾನಕಗಳ ಸೇವನೆ ಅಗತ್ಯ

lಹತ್ತಿಯ ನುಣುಪಾದ ಬಟ್ಟೆಯಿಂದ ಬೆವರು ಒರೆಸಿಕೊಳ್ಳಿ, ಇದರಿಂದ ಚರ್ಮರೋಗ ಕಾಣಿಸುವಿದಿಲ್ಲ

lಮಜ್ಜಿಗೆ, ಎಳನೀರು, ಕಬ್ಬಿನಹಾಲು ಕುಡಿಯಿರಿ. ಹಣ್ಣುಗಳನ್ನು ಹೆಚ್ಚು ತಿನ್ನಿ

lಅತಿಯಾದ ಬಿಸಿಲಿಗೆ ಹೃದ್ರೋಗಿಗಳು,ಕಾಮಾಲೆ, ಕಾಲರಾ, ಕರುಳುಬೇನೆ, ವಿಷಮ ಶೀತಜ್ವರ, ವಾಂತಿ-ಭೇದಿ ಇದ್ದವರಿಗೆ ತೊಂದರೆಯಾಗಬಹುದು. ಇಂಥ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ

lಹಿರಿಯರು, ಮಕ್ಕಳಿಗೆ ಮೇಲಿಂದ ಮೇಲೆ ನೀರು ಕುಡಿಸಿ, ತಣ್ಣನೆಯ ಗಾಳಿಗೆ ಮೈ ಒಡ್ಡಿ

lಮಧ್ಯಾಹ್ನದ ಊಟದಲ್ಲಿ ಮೊಸರು, ಮಜ್ಜಿಗೆ, ಹಸಿ ತರಕಾರಿ, ರಾತ್ರಿ ಹಾಲು ಬಳಸಿದರೆ ದೈಹಿಕ ಉಷ್ಣತೆಯಲ್ಲಿ ಸಮತೋಲನ ಕಾಪಾಡಬಹುದು

–ಡಾ.ವಿಜಯಲಕ್ಷ್ಮಿ,

ಆಯುರ್ವೇದ ವೈದ್ಯರು, ಕಲಬುರಗಿ

*

ಕಚೇರಿ ಸಮಯ ಬದಲಾವಣೆ ಇಲ್ಲ

ಕಲಬುರಗಿ: ಈ ಬಾರಿ ಕೂಡ ಏಪ್ರಿಲ್‌, ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ವೇಳೆಯನ್ನು ಬದಲಾವಣೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಪರೀತ ಶಕೆ ಇರುವ ಕಾರಣ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಬೇಕು ಎಂದು ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರ, ‘ದೆಹಲಿಯಲ್ಲಿ ಕಲಬುರಗಿಗಿಂತಲೂ ಹೆಚ್ಚಿನ ಪ್ರಮಾಣದ ತಾಪಮಾನವಿದೆ. ಆದರೂ ಅಲ್ಲಿನ ಕಚೇರಿಗಳ ಸಮಯವನ್ನು ಬದಲಾವಣೆ ಮಾಡಿಲ್ಲ. ಹಾಗಾಗಿ, ಕಲ್ಯಾಣ ಕರ್ನಾಟಕದಲ್ಲೂ ಯಾವುದೇ ರೀತಿಯಲ್ಲಿ ಕಚೇರಿ ಸಮಯ ಬದಲಾವಣೆ ಮಾಡುವುದಿಲ್ಲ’ ಎಂದು ಸ್ಪಷ್ವಪಡಿಸಿದೆ.

ಕಳೆದ ವರ್ಷ (2021) ಕೂಡ ಸಂಘವು ಸಲ್ಲಿಸಿದ ಮನವಿ ತಿರಸ್ಕರಿಸಿದ್ದ ರಾಜ್ಯ ಸರ್ಕಾರ, ಕೋವಿಡ್‌ ಹಾವಳಿ ಇರುವ ಕಾರಣ ಬೇಸಿಗೆಯಲ್ಲಿ ಕಚೇರಿ ಸಮಯ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿತ್ತು.

*

ಎ.ಸಿ, ಕೂಲರ್‌ಗೆ ಹೆಚ್ಚಿನ ಬೇಡಿಕೆ

ಎ.ಸಿ, ಏರ್‌ಕೂಲರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಧ್ಯರಾತ್ರಿ ಕೂಡ ಬಿಸಿಗಾಳಿ ಸುಳಿಯುವುದರಿಂದ ನೆಮ್ಮದಿಯ ನಿದ್ರೆಗೆ ಏರ್‌ಕೂಲರ್‌ಗಳು ಅನಿವಾರ್ಯ. ಇಷ್ಟು ದಿನ ಮನೆಯ ಮೂಲೆಯಲ್ಲಿದ್ದ ಏರ್‌ಕೂಲರ್‌ಗಳನ್ನು ದುರಸ್ತಿ ಮಾಡಿಸುವವರೇ ಹೆಚ್ಚು. ಕೂಲರ್‌ಗಳು ಹೆಚ್ಚು ಬಿಕರಿಯಾಗುತ್ತಿವೆ.

ತಂಪಾದ ವಾತಾವರಣ ಹೊಂದಲು ಜನರು ಖರೀದಿಸುತ್ತಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.