ಪ್ರಜಾವಾಣಿ ವಾರ್ತೆ
ಕಲಬುರಗಿ: ‘ಜನರು ಹಾಗೂ ಸಮಾಜದ ಅಭಿವೃದ್ಧಿಗೆ ಮಾಡುವ ಕೆಲಸವನ್ನು ಎಲ್ಲರೂ ಗೌರವಿಸಬೇಕು. ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಬೇಕು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಭಾನುವಾರ ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 15ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ವಿವಿಧ ಸ್ಥರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ನೌಕರರು ತಮ್ಮ ಉಳಿತಾಯದ ದುಡ್ಡಿನಲ್ಲಿ ಸ್ವತಃ ನಿವೇಶನ ಹೊಂದುವ ಕನಸು, ಸಂಘದ ಪದಾಧಿಕಾರಿಗಳು ನನಸು ಮಾಡಿದ್ದಾರೆ. ಬೆಲೆ ಏರಿಕೆಯಂಥ ಪರಿಸ್ಥಿತಿಯಲ್ಲಿ ಕಡಿಮೆ ಬೆಲೆಗೆ ನಿವೇಶನಗಳನ್ನು ನೀಡಿ ನೌಕರರಿಗೆ ನೆರವಾಗಿದ್ದಾರೆ. ಅದರಂತೆ ಸಂಘದ ಸದಸ್ಯರೂ ಅವರ ನೆರವಿಗೆ ನಿಲ್ಲಬೇಕು’ ಎಂದು ಹೇಳಿದರು.
‘ನಗರೀಕರಣ ಪ್ರಭಾವ ಹಾಗೂ ಶಿಕ್ಷಣ ಉದ್ದೇಶದಿಂದ ಹಳ್ಳಿಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ನಿವೇಶನದ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೆ ಏರಿಕೆಯಾಗುತ್ತಿವೆ. ನೌಕರರಿಗೆ ಸಹಾಯ ಮಾಡಲು ಜಮೀನು ಖರೀದಿಸಿ ಮೊದಲ ಹಂತದ ನಿವೇಶನಗಳನ್ನು ನೀಡಿದ್ದಾರೆ. 2ನೇ ಹಂತದಲ್ಲಿ ಸುಮಾರು 7 ಎಕರೆ ಜಮೀನು ಖರೀದಿಸಿ ನಿವೇಶನ ನೀಡುತ್ತಿದ್ದಾರೆ. ಸಂಘದ ಕಾರ್ಯ ಹೀಗೆ ಮುಂದುವರಿಯಲಿ. ನಮ್ಮಿಂದ ಬೇಕಾದ ಸಹಕಾರ ನೀಡಲು ಸಿದ್ಧ’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಹಾನಗರ ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಎಂ.ಕೆ. ಮಾತನಾಡಿ, ‘ನೌಕರರ ಸಹಕಾರದಿಂದ ಜಮೀನು ಖರೀದಿಸಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಕಡಿಮೆ ದರದಲ್ಲಿ ಹಂಚಿಕೆ ಮಾಡುವ ಮೂಲಕ ದೇಸಾಯಿ ಅವರು ನೌಕರರಿಗೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಯಾವುದೇ ಕೆಲಸವನ್ನು ಮಾಡುವಾಗ ಹಲವಾರು ಅಡತಡೆಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿನಿಂತು ನೌಕರರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.
ಗುಲಬರ್ಗಾ ಮಹಿಳಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಶೈಲಜಾ ತಪಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು.
ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ನೌಕರರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ 2008ರಲ್ಲಿ ಸಂಘ ಸ್ಥಾಪನೆ ಮಾಡಲಾಯಿತು. ಸಂಘದ ಸದಸ್ಯರ ಸಹಕಾರದಿಂದ ಮೊದಲು ಹಂತದಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗಿದೆ. 2ನೇ ಹಂತದಲ್ಲಿ 7 ಎಕರೆ ಪ್ರದೇಶದಲ್ಲಿ ನಿವೇಶನ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನೂ ಕೆಲವು ದಿನಗಳಲ್ಲಿ ಹಂಚಿಕೆ ಮಾಡಲಾಗುವುದು. ಇನ್ನು ಮೂರನೇ ಹಂತದಲ್ಲಿ ಅಭಿವೃದ್ಧಿ ಪಡಿಸಲು ಪಾಣೇಗಾಂವದಲ್ಲಿ ಎರಡು ಎಕರೆ ಜಮೀನು ಖರೀದಿಸಲಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಎಲ್ಲರ ಸಹಕಾರದಿಂದ ಸಂಘಕ್ಕೆ ₹ 1 ಕೋಟಿ ಲಾಭಾಂಶ ಬಂದಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ರಾಗಮ್ಮ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಎರಡನೇ ಹಂತದ ನಿವೇಶನದ ನಕ್ಷೆಯನ್ನು ಹಾಗೂ ಸದಸ್ಯರಿಗೆ ನೀಡಿದ ಬೆಳ್ಳಿಯ ನಾಣ್ಯವನ್ನು ಶಾಸಕರು ಹಾಗೂ ಅತಿಥಿಗಳು ಬಿಡುಗಡೆಗೊಳಿಸಿದರು.
ಬಳಿಕ ಎಸ್‌ಎಸ್‌ಎಸ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.