ADVERTISEMENT

ಭಾರತ ಬಂದ್‌ಗೆ ಬೆಂಬಲ: ಎನ್‌ಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:11 IST
Last Updated 25 ಸೆಪ್ಟೆಂಬರ್ 2021, 5:11 IST

ಕಲಬುರ್ಗಿ: ‘ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಸೆ. 27ರಂದು ಕರೆ ನೀಡಿದ ಭಾರತ್‌ ಬಂದ್‌ಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ ನೀಡಲಿದೆ. ಅಂದು ನಡೆಯುವ ಪ್ರತಿಭಟನೆಯಲ್ಲೂ ಎಐಟಿಯುಸಿ, ಸಿಐಟಿಸಿ, ಎಐಯುಟಿಯುಸಿ, ಐಎನ್‌ಟಿಯುಸಿ, ಎನ್‌ಸಿಲ್‌ ಸಂಘಟನೆಗಳ ಕಾರ್ಯಕರ್ತರೂ ಪಾಲ್ಗೊಳ್ಳಲಿದ್ದಾರೆ’ ಎಂದು ಎನ್‌ಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ ಹೇಳಿದರು.

‘ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ ಕೃಷಿ ಕಾಯ್ದೆ, ವಿದ್ಯುತ್‌ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕಳೆದ ಒಂಬತ್ತು ತಿಂಗಳಿಂದ ರೈತರು ದೊಡ್ಡಮಟ್ಟದ ಹೋರಾಟ ನಡೆಸಿದ್ದಾರೆ. ಇದರ ನಿರ್ಣಾಯಕ ಘಟ್ಟ ಎನ್ನುವಂತೆ ಈ ಬಂದ್‌ ನಡೆಯಲಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ತನ್ನ ಎರಡನೇ ಆಡಳಿತಾವಧಿಯಲ್ಲೂ ಕೇಂದ್ರ ಸರ್ಕಾರ ಜನಸಾಮಾನ್ಯರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೊರೊನಾದಿಂದ ಇಡೀ ದೇಶದ ಜನ ತತ್ತರಿಸಿದ ಸಂದರ್ಭದಲ್ಲೂ ಸರ್ಕಾರ ಕಾರ್ಪೊರೇಟ್‌ ಸಂಸ್ಥೆಗಳ ಹಿತ
ಕಾಯಲು ನಿಂತಿತೇ ಹೊರತು; ಬಡವರ ಕಷ್ಟಕ್ಕೆ ನೆರವಾಗಲಿಲ್ಲ. ದೇಶದ ಜನರ ತೆರಿಗೆ ಹಣದಿಂದ
ಕಟ್ಟಿದ ಸಾರ್ವಜನಿಕ ಸಂಪನ್ಮೂಲಗಳನ್ನು ತನ್ನ ಕಾರ್ಪೊರೇಟ್‌ ಕುಳಗಳ ಕೈವಶ ಮಾಡುವುದುಕ್ಕೆ ನಾವು ಬಿಡುವುದಿಲ್ಲ. ಪ್ರಧಾನಿ ಮೋದಿ ಘೋಷಿಸಿದ ‘ರಾಷ್ಟ್ರೀಯ ನಗದೀಕರಣ ಯೋಜನೆ’ಯನ್ನು ನಮ್ಮ ವೇದಿಕೆ ಉಗ್ರವಾಗಿ ಖಂಡಿಸುತ್ತದೆ’ ಎಂದರು.

ADVERTISEMENT

‘27ರಂದು ನಡೆಯುವ ಐತಿಹಾಸಿಕ ಹೋರಾಟದಲ್ಲಿ ದೇಶದ ಅಸಂಖ್ಯಾತ ಸಂಘಟನೆಗಳು, ದುಡಿಯುವ ವರ್ಗದವರು, ಬಡವರು, ಮಹಿಳೆಯರು, ಯುವ ಸಮುದಾಯ ಕೂಡ ಒಕ್ಕೊರಲಿನ ಧ್ವನಿ ಎತ್ತಲಿದೆ’ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಸಿಐಟಿಯು ಮುಖಂಡ ನಾಗಯ್ಯ ಸ್ವಾಮಿ, ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ. ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.