ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಸಂಜೆ ಕಲಬುರಗಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜಗತ್ ವೃತ್ತ ಮಾರ್ಗದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು
ಕಲಬುರಗಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ್ದನ್ನು ಖಂಡಿಸಿ ನಗರದಲ್ಲಿ ವಿವಿಧ ದಲಿತಪರ ಸಂಘಟನೆಗಳು ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದವು.
‘ಕೋಮುವಾದಿಗಳಿಗೆ ಧಿಕ್ಕಾರ’, ‘ಜಾತಿವಾದಿಗಳಿಗೆ ಧಿಕ್ಕಾರ’ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು. ‘ಶೂ’ ಎಸೆದ ವಕೀಲನ ಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಲಬುರಗಿ ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ 10 ನಿಮಿಷ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಡಿ.ಜಿ.ಸಾಗರ ಮಾತನಾಡಿ, ‘ಸುಪ್ರೀಂಕೋರ್ಟ್‌ನಲ್ಲೇ ಸಿಜೆ ವಿರುದ್ಧ ಶೂ ಎಸೆದ ಘೋರ ಕೃತ್ಯ ಖಂಡನೀಯ. ಇದು ಸಂವಿಧಾನ, ದೇಶ ಹಾಗೂ ನ್ಯಾಯಾಲಯಕ್ಕೆ ಮಾಡಿದ ಅವಮಾನವಾಗಿದೆ. ಈ ಕೃತ್ಯದ ಹಿಂದೆ ಯಾರೆಲ್ಲರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಿ, ಆರೋಪಿ ಸಹಿತ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಸುರೇಶ ಹಾದಿಮನಿ, ಬಿ.ಸಿ.ವಾಲಿ, ಎಸ್.ಪಿ.ಸುಳ್ಳದ, ಅಂಬಣ್ಣ ಜೀವಣಗಿ, ಎಚ್. ಶಂಕರ್ ಸೇರಿದಂತೆ ಹಲವರರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ರಿಪಬ್ಲಿಕನ್ ಯೂತ್ ಫೆಡರೇಷನ್ ಕಾರ್ಯಕರ್ತರು ಕೂಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮುಖಂಡರಾದ ಹನುಮಂತ ಇಟಗಿ, ಸಂತೋಷ ಮೇಲ್ಮನಿ, ಸಿದ್ದು ಬೆಳಸೂರ, ಶಿವಕುಮಾರ, ರಾಘವೇಂದ್ರ ವಾಳಿಕಾರ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.