ಮೊಹ್ಮದ್ ಬಿಲಾಲ್
ಟಮಾಟ ಸಮೀರ್
ಕಲಬುರಗಿ: ರಿಯಲ್ ಎಸ್ಟೇಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಲಗತ್ತಿ ಕ್ರಾಸ್‌ನ ಅರಾಫತ್ ಕಾಲೊನಿ ನಿವಾಸಿಯಾಗಿದ್ದ ಮೊಹ್ಮದ್ ಬಿಲಾಲ್ ಅಲಿಯಾಸ್ ಸುರೇಶ ರೆಡ್ಡಿ (45) ಎಂಬುವವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಸ್ಲಾಮಾಬಾದ್ ಕಾಲೊನಿ ನಿವಾಸಿ ಸಮೀರ್ ಅಲಿಯಾಸ್ ಟಮಾಟ ಸಮೀರ್ ಎಂಬಾತನನ್ನು ಸಬರ್ಬನ್ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸಿದ್ದಾರೆ.
ಶನಿವಾರ ರಾತ್ರಿ 10.15ರ ಸುಮಾರಿಗೆ ಮೊಹ್ಮದ್ ಬಿಲಾಲ್ ಅವರನ್ನು ಟಿಪ್ಪು ಕಾಲೇಜಿನ ಹತ್ತಿರ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಕುರಿತು ಅಕ್ಕಪಕ್ಕದ ನಿವಾಸಿಗಳು ಬಿಲಾಲ್ ಪತ್ಬಿ ಹಫಿಜಾ ಬೇಗಂ ಅವರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದು ನೋಡಿದಾಗ ತನ್ನ ಪತಿ ಕೊಲೆಯಾಗಿರುವುದು ಖಚಿತಪಟ್ಟಿತ್ತು. ಹಫಿಜಾ ಬೇಗಂ ಅವರು ತನ್ನ ಪತಿಯೊಂದಿಗೆ ರಿಯಲ್ ಎಸ್ಟೇಟ್ ಹಾಗೂ ಇತರೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಮೀರ್, ಎ.ಸಿ. ಸೋಹೆಲ್, ಟಿಪ್ಪು, ಬಿಸ್ಲೇರಿ ಹುಸೇನ್ ಎಂಬುವವರು ಆಗಾಗ್ಗೆ ಜಗಳ ಮಾಡುತ್ತಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಸಬರ್ಬನ್ ಪೊಲೀಸರು ಆರೋಪಿ ಸಮೀರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ್, ಎಸಿಪಿ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬರ್ಬನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ (ಪ್ರಭಾರ) ಸುಶೀಲಕುಮಾರ್, ಪಿಎಸ್‌ಐ ಬಸವರಾಜು, ಎಎಸ್ಐ ನಾಗರಾಜ, ಸಿಬ್ಬಂದಿಯಾದ ಮಂಜುನಾಥ, ಫಿರೋಜ್, ಶಶಿಕಾಂತ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.