ADVERTISEMENT

ಹೈದರಾಬಾದಲ್ಲಿ ಮೃತಪಟ್ಟಿದ್ದ ದಂಪತಿಯನ್ನು ದೇಣಿಗೆ ಎತ್ತಿ ಅಂತ್ಯಕ್ರಿಯೆ ಮಾಡಿದರು!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 17:23 IST
Last Updated 22 ಆಗಸ್ಟ್ 2025, 17:23 IST
<div class="paragraphs"><p>ಹೈದರಾಬಾದಲ್ಲಿ ಮೃತಪಟ್ಟಿದ್ದ ದಂಪತಿಯನ್ನು ದೇಣಿಗೆ ಎತ್ತಿ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು</p></div>

ಹೈದರಾಬಾದಲ್ಲಿ ಮೃತಪಟ್ಟಿದ್ದ ದಂಪತಿಯನ್ನು ದೇಣಿಗೆ ಎತ್ತಿ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು

   

ಸೇಡಂ (ಕಲಬುರಗಿ ಜಿಲ್ಲೆ): ಹೈದರಾಬಾದನಲ್ಲಿ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ಉಪ್ಪಾರ ಮತ್ತು ಪತ್ನಿ ವೆಂಕಟಮ್ಮ ದಂಪತಿ ಅಂತ್ಯಕ್ರಿಯೆಯನ್ನು ಶುಕ್ರವಾರ ಗ್ರಾಮಸ್ಥರೇ ಸ್ವತಃ ದೇಣಿಗೆ ಸಂಗ್ರಹಿಸಿ ನೆರವೇರಿಸಿದ್ದಾರೆ.

ಮೃತ ಲಕ್ಷ್ಮಯ್ಯ ಉಪ್ಪಾರ ಮತ್ತು ಪತ್ನಿ ವೆಂಕಟಮ್ಮ ಉಪ್ಪಾರ ಅವರ ಪಾರ್ಥಿವ ಶರೀರಗಳು ಗುರುವಾರ ತಡರಾತ್ರಿ ಗ್ರಾಮಕ್ಕೆ ತಲುಪಿದವು. ಕುಟುಂಬದಲ್ಲಿ ಪುತ್ರ ಭಗವಂತ ಬಿಟ್ಟರೆ ಯಾರೂ ಇಲ್ಲದ್ದನ್ನು ಗಮನಿಸಿದ ಗ್ರಾಮಸ್ಥರು ಸ್ವತಃ ಮುಂದೆ ನಿಂತು ಅಂತ್ಯಕ್ರಿಯೆ ನಡೆಸಿದರು.

ADVERTISEMENT

‘ಭಗವಂತಗೆ ಸರಿಯಾದ ಮನೆ ಮತ್ತು ಹೊಲ ಏನೂ ಇಲ್ಲ. ತಂದೆ–ತಾಯಿ ಕಳೆದುಕೊಂಡ ಅನಾಥನಾಗಿದ್ದಾನೆ. ಗ್ರಾಮಸ್ಥರೆಲ್ಲ ದುಃಖದಲ್ಲಿ ಪಾಲ್ಗೊಂಡು ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಿದೆವು. ಎಲ್ಲರಿಂದ ₹ 22 ಸಾವಿರ ಹಣ ಹಣ ಸಂಗ್ರಹವಾಯಿತು. ಅದೇ ಹಣ ಅಂತ್ಯಕ್ರಿಯೆ ಬಳಸಿ, ಉಳಿದಿದ್ದನ್ನು ಅವರ ಕುಟುಂಬಕ್ಕೆ ನೀಡಲಾಗಿದೆ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆ-ತಾಯಿ ಕಳೆದುಕೊಂಡ ಭಗವಂತ ಉಪ್ಪಾರ ಅವರಿಗೆ ಸೂಕ್ತ ಆಶ್ರಯವಿಲ್ಲ. ಭೂಮಿಯೂ ಇಲ್ಲ. ಆತನ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಆತನ ನೋವಿಗೆ ಸ್ಪಂದಿಸಿ ಪರಿಹಾರ ನೀಡಬೇಕು’ ಎಂದು ರಂಜೋಳ ಗ್ರಾಮಸ್ಥ ರಾಮಚಂದ್ರ ಗುತ್ತೇದಾರ ಒತ್ತಾಯಿಸಿದ್ದಾರೆ.

ರಂಜೋಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣರೆಡ್ಡಿ ಶೇರಿಕಾರ, ಮುಖಂಡರಾದ ನಾಗೇಶರೆಡ್ಡಿ ಪಾಟೀಲ, ಅಂಜಲಪ್ಪ ಬೋಯಿನ್‌, ಚಂದ್ರಶೇಖರ ಮಡಿವಾಳ, ಸುಭಾಷಚಂದ್ರ ನಾಟೀಕಾರ, ಸಾಯಪ್ಪ ಕುಂಬಾರ, ಭೀಮರಾಐ ಗಡ್ಡಿಮನಿ, ಶಿವಲಿಂಗ ಕುಂಬಾರ, ರವಿ ಹೈಯ್ಯಾಳ, ತಿಪ್ಪ ಪಾಡಂಪಳ್ಳಿ, ಚನ್ನಪ್ಪ ಚಿಂಚೋಳಿ, ಶಂಕರ ಜೋಗಿ, ಶಾಂತಪ್ಪ ಬುಡಗ ಜಂಗಮ, ಶಿವಶರಣಪ್ಪ ಮೈಲಾರಿ, ಮಲ್ಲಿಕಾರ್ಜುನ ರಾಯಿನ್‌, ಲಕ್ಷ್ಮಣ ಹೈಯ್ಯಾಳ ಇದ್ದರು.

ದುಡಿಮೆಗೆಂದು ಹೈದರಾಬಾದ್‌ಗೆ ತೆರಳಿದ್ದ ಅನಂತಪುರ ಗ್ರಾಮದ ಅನಿಲ ಉಪ್ಪಾರ, ಪತ್ನಿ ಕವಿತಾ ಉಪ್ಪಾರ, ಪುತ್ರ ಅಪ್ಪು ಅವರ ಅಂತ್ಯಕ್ರಿಯೆಯೂ ಶುಕ್ರವಾರ ಮಧ್ಯಾಹ್ನ ಸ್ವಂತ ಜಮೀನಿನಲ್ಲಿ ಜರುಗಿದೆ ಎಂದು ಅನಂತಪುರ ಗ್ರಾಮಸ್ಥರು ‘ಪ್ರಜಾವಾಣಿʼಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.