ADVERTISEMENT

ಅನಾಥರಿಗೆ ನಮ್ಮವರೆಂದು ಪ್ರೀತಿ ನೀಡಿ : ನವೀನಕುಮಾರ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 16:09 IST
Last Updated 20 ನವೆಂಬರ್ 2023, 16:09 IST
ಕಲಬುರಗಿಯ ಸರ್ಕಾರಿ ಮಹಿಳಾ ವಸತಿಗೃಹದಲ್ಲಿ ಭಾನುವಾರ ಸಂಗಮೇಶ್ವರ ಮಹಿಳಾ ಮಂಡಳದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಕಲಬುರಗಿಯ ಸರ್ಕಾರಿ ಮಹಿಳಾ ವಸತಿಗೃಹದಲ್ಲಿ ಭಾನುವಾರ ಸಂಗಮೇಶ್ವರ ಮಹಿಳಾ ಮಂಡಳದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು   

ಕಲಬುರಗಿ: ‘ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ, ಸಂಘ–ಸಂಸ್ಥೆಯವರು ಅನಾಥರನ್ನು ನಮ್ಮವರೆಂದು ಭಾವಿಸಿ ಸ್ವೀಕರಿಸುವುದು, ಪ್ರೀತಿ ನೀಡುವುದು ಬಹಳ ಮುಖ್ಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನಕುಮಾರ್ ಯು. ಹೇಳಿದರು.

ನಗರದ ಸಂಗಮೇಶ್ವರ ಕಾಲೊನಿಯ ಸರ್ಕಾರಿ ಮಹಿಳಾ ವಸತಿಗೃಹದಲ್ಲಿ ಭಾನುವಾರ ಸಂಗಮೇಶ್ವರ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಾಥ ಬಾಲಕಿಯರ ವಸತಿಗೃಹದ ಅಧೀಕ್ಷಕಿ ಅನುರಾಧಾ ಪಾಟೀಲ ಮಾತನಾಡಿ, ‘ಸಮಾಜದ ಸಂಘ–ಸಂಸ್ಥೆಗಳು ಸಹಕರಿಸಿದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ, ‘ಇಲ್ಲಿಯ ಮಕ್ಕಳು, ಮಹಿಳೆಯರು ಯಾರೂ ಅಪರಾಧಿಗಳಲ್ಲ. ಬದುಕಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು, ಭಾವನೆಗಳನ್ನು ಪಡೆಯುವ ಹಕ್ಕು ಇವರಿಗಿದೆ. ಸರ್ಕಾರ ಮತ್ತು ನಮ್ಮಂತಹ ಸಂಘ–ಸಂಸ್ಥೆಗಳು ಈ ಕೆಲಸವನ್ನು ಮಾಡಬೇಕಾಗಿದೆ. ಇದು ಸಮಾಜದ ಜವಾಬ್ದಾರಿಯೂ ಹೌದು’ ಎಂದು ಹೇಳಿದರು.

ಮಂಡಳದ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್‌ ಮಾತನಾಡಿ, ‘ಮಹಿಳಾ ಮಂಡಳವು ಸುಮಾರು 45 ವರ್ಷಗಳಿಂದ ಮಹಿಳೆಯರ ಬದುಕು ಹಸನಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ನೀಡಿ ಮುಖ್ಯವಾಹಿನಿಯಲ್ಲಿ ವಿದ್ಯಾಭ್ಯಾಸ ಪಡೆಯುವಂತೆ ಮಾಡಿದೆ’ ಎಂದರು.

ಸ್ಪರ್ಧೆ:

ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ನೃತ್ಯದಲ್ಲಿ ಯಶೋಧಾ ಹರಿಸಿಂಗ್(ಪ್ರಥಮ), ಪೂಜಾ ಎಸ್‌. (ದ್ವಿತೀಯ), ಕೌಶಲ್ಯಾ ಶರಣಪ್ಪ (ತೃತೀಯ) ಬಹುಮಾನ ಪಡೆದರು.

ರಂಗೋಲಿಯಲ್ಲಿ ನಿಖಿತಾ ವಿಷ್ಣುಕಾಂತ (ಪ್ರಥಮ), ತಿಪ್ಪಮ್ಮ ರಮೇಶ (ದ್ವಿತೀಯ), ರೇಖಾ ನಾಗಣ್ಣ (ತೃತೀಯ) ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. ಕಾವ್ಯಶ್ರೀ ಹಾಗೂ ಸುನಿತಾ ನಿರ್ಣಾಯಕರಾಗಿದ್ದರು.

ಮಂಡಳದ ಸದಸ್ಯರಾದ ಸುಷ್ಮಾ ನವಣಿ, ನಿರ್ಮಲಾ ಪಾಟೀಲ, ಸುರೇಖಾ ರಾವ್, ಭಾರತಿ ಎಸ್. ಇದ್ದರು. ಶ್ರುತಿ ವಿ.ಸಾಗರ್ ಪ್ರಾರ್ಥಿಸಿದರು. ಶಾಂತರಾವ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.