ADVERTISEMENT

ಮತದಾನ ಜಾಗೃತಿಗೆ ಎತ್ತಿನ ಬಂಡಿ ಜಾಥಾ

ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 4:57 IST
Last Updated 23 ಏಪ್ರಿಲ್ 2024, 4:57 IST
ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ‘ಮತದಾನ ಜಾಗೃತಿ ಜಾಥಾ’ ಅಂಗವಾಗಿ ಎತ್ತಿನ ಬಂಡಿಗಳ ಮೆರವಣಿಗೆ ನಡೆಯಿತು. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಭಂವರ್‌ಸಿಂಗ್ ಮೀನಾ ಪಾಲ್ಗೊಂಡಿದ್ದರು
ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ‘ಮತದಾನ ಜಾಗೃತಿ ಜಾಥಾ’ ಅಂಗವಾಗಿ ಎತ್ತಿನ ಬಂಡಿಗಳ ಮೆರವಣಿಗೆ ನಡೆಯಿತು. ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಭಂವರ್‌ಸಿಂಗ್ ಮೀನಾ ಪಾಲ್ಗೊಂಡಿದ್ದರು   

ಕಲಬುರಗಿ: ಅಲ್ಲಿ ಅಲಂಕೃತ ಎತ್ತಿನ ಬಂಡಿಗಳು ಸಾಲುಗಟ್ಟಿದ್ದವು. ಬಣ್ಣ ಹಚ್ಚಿದ್ದ ಎತ್ತುಗಳು ಮೆರವಣಿಗೆಗೆ ಅಣಿಯಾಗಿದ್ದವು. ನೆರೆದಿದ್ದ ಜನರಲ್ಲಿ ಸಂಭ್ರಮವಿತ್ತು. ಅವರ ಕೈಯಲ್ಲಿ ‘ನಮ್ಮ ಮತ ಅಮೂಲ್ಯ, ಕಟ್ಟಲಾರೆವು ಇದರ ಮೌಲ್ಯ’, ‘ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’, ‘ವ್ಯರ್ಥವಾಗದಿರಲಿ ಪ್ರತಿಯೊಂದು ಮತ, ಇದುವೇ ಪ್ರಜಾಪ್ರಭುತ್ವದ ಹಿತ’ ಸಂದೇಶವುಳ್ಳ ಭಿತ್ತಿ ಫಲಕಗಳಿದ್ದವು. ಬಳಿಕ ಎಲ್ಲರೂ ಸೇರಿ ಸುಡು ಬಿಸಿಲಿನಲ್ಲೇ ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸಿದರು...

ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ‘ಮತದಾನ ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.

ಜಾಗೃತಿ ಜಾಥಾಗೆ ಚಾಲನೆ ನೀಡಿದ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಭಂವರ್‌ಸಿಂಗ್ ಮೀನಾ, ಎತ್ತಿನ ಬಂಡಿ ನಡೆಸಿ ಸಾರ್ವಜನಿಕರಲ್ಲಿ ಮತದಾನ ಮಹ್ವತದ ಅರಿವು ಮೂಡಿಸಿದರು. ‘ಮೇ 7ರಂದು ಎಲ್ಲ ಮತದಾರರು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡಬೇಕು’ ಎಂದರು.ಜಿಲ್ಲಾ ಸ್ವೀಪ್‌ ನೋಡಲ್‌ ಅಧಿಕಾರಿ ಅಬ್ದುಲ್‌ ಅಜೀಮ್‌ ಸೇರಿದಂತೆ ಅಧಿಕಾರಿಗಳು ಅವರಿಗೆ ಸಾಥ್‌ ನೀಡಿದರು.

ADVERTISEMENT

ಪಟ್ಟಣ ಗ್ರಾಮದಿಂದ ಹೊರಟ 10ಕ್ಕೂ ಹೆಚ್ಚು ‘ಎತ್ತಿನ ಬಂಡಿ’ಗಳ ಮೆರವಣಿಗೆ ಆಳಂದ ಮುಖ್ಯರಸ್ತೆಯ ವರೆಗೆ ಸಾಗಿತು. ಮಹಿಳೆಯರು ಪೂರ್ಣಕುಂಭ, ಭಿತ್ತಿ ಫಲಕ ಹಿಡಿದು ನಡೆದರೆ, ಅವರ ಹಿಂದೆ ಅಲಂಕೃತ ಎತ್ತಿನ ಬಂಡಿಗಳು ಸಾಗಿದವು.

ಕಲಬುರಗಿ ತಾಲ್ಲೂಕಿನ ಎಂಸಿಸಿ ನೋಡಲ್ ಅಧಿಕಾರಿ ಸೈಯದ್ ಪಟೇಲ್ ಕಡ್ಡಾಯ ಮತದಾನ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಕಲಬುರಗಿಯ ವೀರೇಂದ್ರ ಪಾಟೀಲ ಬಡಾವಣೆಯ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ‘ಸ್ವೀಪ್‌ ಫುಟ್‌ಬಾಲ್‌ ಲೀಗ್‌’ಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ‌ ಭಂವರ್‌ಸಿಂಗ್ ಮೀನಾ ಫುಟ್‌ಬಾಲ್‌ ‘ಕಿಕ್‌’ ಮಾಡುವ ಮೂಲಕ ಚಾಲನೆ ನೀಡಿದರು

ಲೋಕಸಭೆ ಚುನಾವಣೆ: ‘ಸ್ವೀಪ್‌’ ಫುಟ್‌ಬಾಲ್‌ ಲೀಗ್‌ಗೆ ಚಾಲನೆ ಕಲಬುರಗಿ: ಲೋಕಸಭೆ ಚುನಾವಣೆ ಅಂಗವಾಗಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿರುವ ‘ಸ್ವೀಪ್‌ ಫುಟ್‌ಬಾಲ್‌ ಲೀಗ್‌’ಗೆ ನಗರದ ವೀರೇಂದ್ರ ಪಾಟೀಲ ಬಡಾವಣೆಯ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ಚಾಲನೆ ದೊರೆಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ‌ ಭಂವರ್‌ಸಿಂಗ್ ಮೀನಾ ಫುಟ್‌ಬಾಲ್‌ ‘ಕಿಕ್‌’ ಮಾಡುವ ಮೂಲಕ ಲೀಗ್‌ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ‌ ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಫುಟ್‌ಬಾಲ್‌ ಅಸೋಸಿಯೇಷನ್ ಸಹಯೋಗದೊಂದಿಗೆ ಏಪ್ರಿಲ್‌ 25ರ ವರೆಗೆ ಈ ಟೂರ್ನಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ  ಪಾಲ್ಗೊಂಡಿದ್ದು ಏ.25ರಂದು ಮಧ್ಯಾಹ್ನ ಫೈನಲ್ ಪಂದ್ಯ ಜರುಗಲಿದೆ. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ್ ಎನ್.ಅಷ್ಟಗಿ ಫುಟ್‌ಬಾಲ್‌ ಅಸೋಸಿಯೇಷನ್ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.