ADVERTISEMENT

8 ರಿಂದ ಸ್ವಚ್ಛತಾ ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 10:37 IST
Last Updated 5 ಆಗಸ್ಟ್ 2018, 10:37 IST
ಸ್ವಚ್ಛ ಸರ್ವೇಕ್ಷಣ ಅಭಿಯಾನದ ಲೋಗೊ
ಸ್ವಚ್ಛ ಸರ್ವೇಕ್ಷಣ ಅಭಿಯಾನದ ಲೋಗೊ   

ಕಲಬುರ್ಗಿ: ಜಿಲ್ಲೆಯಾದ್ಯಂತ ಆ.8 ರಿಂದ 14ರ ವರೆಗೆ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018’ ಜನಾಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಹಂತದಲ್ಲಿ ಚಾಲನೆ ನೀಡಿ ಅನುಷ್ಠಾನಗೊಳಿಸುವ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಸ್ವಚ್ಛತಾ ಸಪ್ತಾಹದಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಊಟಕ್ಕೆ ಮುನ್ನ ಸ್ವಚ್ಛವಾಗಿ ಕೈತೊಳೆಯುವ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗುತ್ತದೆ. ಆ.8 ರಿಂದ 14ರ ವರೆಗೆ ಪ್ರತಿದಿನ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಆ.8ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ, ಶಾಲೆ, ಅಂಗನವಾಡಿ, ವಸತಿ ನಿಲಯಗಳಲ್ಲಿನ ಆವರಣ ಸ್ವಚ್ಛತೆ, ಕೊಠಡಿಗಳ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆಯನ್ನು ಸಂಬಂಧಪಟ್ಟ ಸಿಬ್ಬಂದಿ ಹಮ್ಮಿಕೊಳ್ಳಬೇಕು. ಆ.9ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳ ಸ್ವಚ್ಛತೆ ಕೈಗೊಳ್ಳಬೇಕು. ಆ.10ರಂದು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಕುರಿತು ರೇಡಿಯೊ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಮತ್ತು ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮದ ಲೋಗೊ ಬಿಡಿಸುವ ಸ್ಪರ್ಧೆ ಹಮ್ಮಿಕೊಳ್ಳಬೇಕು.

ADVERTISEMENT

ಆ.11ರಂದು ಸಂತೆ ಸ್ಥಳಗಳು, ಧಾರ್ಮಿಕ ಸ್ಥಳಗಳು ಮತ್ತು ಉದ್ಯಾನಗಳಲ್ಲಿ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ.12ರಂದು ಸಾರ್ವಜನಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಒಂದು ಲಕ್ಷ ಸಸಿ ನೆಡುವುದು, ಆ.13ರಂದು ನೀರಿನ ಸಂಪನ್ಮೂಲಗಳಾದ ಟ್ಯಾಂಕ್, ಗುಮ್ಮಿಗಳು ಮತ್ತು ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸಬೇಕು. ಕುಡಿಯುವ ನೀರು ಸ್ವಚ್ಛಗೊಳಿಸುವ ಕುರಿತು ಕ್ರಮಕೈಗೊಳ್ಳಬೇಕು. ಆ.14ರಂದು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಕುರಿತು ವಾಕಥಾನ್ ಮತ್ತು ರಂಗೋಲಿ ಸ್ಪರ್ಧೆ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.