ADVERTISEMENT

ಲಿಂಗಾಯತ ಶಾಸಕರ ಕಡೆಗಣನೆ: ಸ್ವಾಮೀಜಿ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:06 IST
Last Updated 2 ಜೂನ್ 2020, 12:06 IST
ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ
ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ   

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಿಂಗಾಯತರನ್ನು ಅಧಿಕಾರ ವಂಚಿತರನ್ನಾಗಿ ಮಾಡುವ ಹುನ್ನಾರ ಬಿಜೆಪಿಯಲ್ಲೇ ನಿರಂತರವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು‘ ಎಂದು ಇಲ್ಲಿನ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

‘ಈ ಭಾಗದಲ್ಲಿ ಲಿಂಗಾಯತ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಈ ಮೂಲಕ ಲಿಂಗಾಯತ ಸಮುದಾಯ ಹಾಗೂ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಯಡಿಯೂರಪ್ಪ ಅವರು ಮುಂದಿನ ತಲೆಮಾರಿನ ಬಗ್ಗೆ ಯೋಚಿಸಿ, ತಮ್ಮ ನಂತರದಲ್ಲಿ ಲಿಂಗಾಯತ ನಾಯಕನನ್ನು ಬೆಳೆಸುವ ಕೆಲಸ ಮಾಡಬೇಕು. ಆದರೆ, ಲಿಂಗಾಯತರು ಬೆಳೆಯಬಾರದು ಎನ್ನುವ ಕುತಂತ್ರ ಮಾಡುವವರನ್ನು ಈಗಲೇ ಮಟ್ಟ ಹಾಕಬೇಕು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಭಾಗದ ಮಠಾಧೀಶರನ್ನು ಯಡಿಯೂರಪ್ಪ ಅವರು ಗೌರವದಿಂದ ಕಾಣುತ್ತಿಲ್ಲ. ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಸದ್ಯ ಇರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಯಸ್ಸಾಗಿದೆ. ಜಿಲ್ಲೆಗೆ ಬಂದರೂ ಕೇವಲ 2 ಗಂಟೆ ಮಾತ್ರ ಇರುತ್ತಾರೆ. ಅವರಿಗೆ ಸಮಯ ಕೊಡಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನೂ ನೇಮಿಸಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಚೇರ್ಮನ್‌ ಇಲ್ಲ. 371 (ಜೆ) ಲೋಪಗಳನ್ನು ಸರಿ ಮಾಡಲು ಆಗುತ್ತಿಲ್ಲ’ ಎಂದೂ ಸ್ವಾಮೀಜಿ ಕಿಡಿ ಕಾರಿದರು.

ADVERTISEMENT

‘ಈಗಲಾದರೂ ಅರ್ಹ ಶಾಸಕರನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಲಿಂಗಾಯತ ಸಮುದಾಯದವರನ್ನೇ ವಿಧಾನ ಪರಿಷತ್‍ಗೆ ಆಯ್ಕೆ ಮಾಡಬೇಕು. ಇದಕ್ಕೆ ಸ್ವಾಮೀಜಿಗಳನ್ನು ಕೂಡ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯಸಭೆಗೆ ಖರ್ಗೆ ಆಯ್ಕೆಯಾಗಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜನ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು. ಕೇಂದ್ರದಲ್ಲಿ ಸರ್ಕಾರದ ವಿರುದ್ಧ ಗಟ್ಟಿ ಧ್ವನಿ ಎತ್ತುವ ನಾಯಕರೇ ಇಲ್ಲವಾಗಿದೆ. ಇದರಿಂದ ವಿರೋಧ ಪಕ್ಷದ ಬಲ ಕುಗ್ಗಿದಂತೆ ಕಾಣುತ್ತಿದೆ. ಹಿರಿಯರಾದ ಖರ್ಗೆ ಅವರಿಗೆ ಸಾಕಷ್ಟು ಅನುಭವ, ಜ್ಞಾನ, ಸಾಮರ್ಥ್ಯ, ವಾಕ್‌ ಚಾತುರ್ಯವಿದೆ. ಯಾರನ್ನಾದರೂ ಅವರು ವಾದದಲ್ಲಿ ಕಟ್ಟಿ ನಿಲ್ಲಿಸಬಲ್ಲರು. ಕಾರಣ ಅವರನ್ನು ಕರ್ನಾಟಕದಿಂದ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು’ ಎಂದೂ ಸ್ವಾಮೀಜಿ ಕಾಂಗ್ರೆಸ್‌ ನಾಯಕರನ್ನು ಆಗ್ರಹಿಸಿದರು.

ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.