
ಕಲಬುರ್ಗಿ: ಆನೆಕಾಲು ರೋಗ ಬರುವುದನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ ಡಿಇಸಿ ಮಾತ್ರೆ ನುಂಗಿಸುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಇಲ್ಲಿಯ ಹೀರಾಪುರ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಮತ್ತು ಉಪಾಧ್ಯಕ್ಷೆ ಶೋಭಾ ಸಿರಸಗಿ ಅವರು ಮಾತ್ರೆ ನುಂಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಎರಡು ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಹಾಗೂ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಜಿಲ್ಲೆಯ 26 ಲಕ್ಷ ಜನರಿಗೆ ಡಿಇಸಿ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವರಾಜ ಸಜ್ಜನಶೆಟ್ಟಿ, ‘ಆನೆಕಾಲು ರೋಗ ತಗುಲಿದವರಿಗೆ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ಕಂಡು ಬರುವುದಿಲ್ಲ. ಹೀಗಾಗಿ ರೋಗದ ಬಗ್ಗೆ ತಿಳಿಯುವುದಿಲ್ಲ. ರೋಗ ಸೋಂಕಿತ ಎರಡು ವರ್ಷಗಳ ನಂತರ ಕಾಲಿನಲ್ಲಿ ಊತ ಉಂಟಾಗುತ್ತದೆ. ಆಗ ಚಿಕಿತ್ಸೆ ಪಡೆದರೆ ಯಾವುದೇ ಫಲ ಸಿಗದು. ವರ್ಷಕ್ಕೊಂದು ಬಾರಿಯಂತೆ 5-6 ವರ್ಷಗಳ ಕಾಲ ಸತತವಾಗಿ ಡಿ.ಇ.ಸಿ. ಮಾತ್ರೆ ನುಂಗುವುದೇ ಮುಂಜಾಗೃತಾ ಕ್ರಮವಾಗಿದೆ’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ. ಪಾಟೀಲ, ಪೈಲೇರಿಯಾ ನಿಯಂತ್ರಣಾಧಿಕಾರಿ ಡಾ.ಬಸವರಾಜ ಗುಳಗಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಆರ್.ಸಿ.ಎಚ್. ಅಧಿಕಾರಿ ಡಾ. ರುದ್ರವಾಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಗಣಜಲಖೇಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.