ADVERTISEMENT

‘ಪ್ರಜಾವಾಣಿ’ ವರದಿಗೆ ಸ್ಪಂದನೆ | ಗೊಬ್ಬೂರು ಗ್ರಾಮಕ್ಕೆ ಬಂತು ನೀರಿನ ಟ್ಯಾಂಕರ್‌

ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 14:26 IST
Last Updated 17 ಜುಲೈ 2019, 14:26 IST
ಅಫಜಲಪುರ ತಾಲ್ಲೂಕಿನ ಗೊಬ್ಬೂರು (ಬಿ) ಗ್ರಾಮದಲ್ಲಿ ಬುಧವಾರ ಟ್ಯಾಂಕರ್‌ ನೀರಿನ  ಪೂರೈಕೆ ಆರಂಭವಾಯಿತು
ಅಫಜಲಪುರ ತಾಲ್ಲೂಕಿನ ಗೊಬ್ಬೂರು (ಬಿ) ಗ್ರಾಮದಲ್ಲಿ ಬುಧವಾರ ಟ್ಯಾಂಕರ್‌ ನೀರಿನ  ಪೂರೈಕೆ ಆರಂಭವಾಯಿತು   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಗೊಬ್ಬೂರು (ಬಿ) ಗ್ರಾಮದ ನೀರಿನ ಬವಣೆ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ‘ಸಚಿವರು ಬಂದು ಹೋದರೂ ನೀಗದ ನೀರಿನ ದಾಹ’ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮತ್ತೊಂದು ಟ್ಯಾಂಕರ್‌ ನೀರು ಪೂರೈಕೆ ಆರಂಭಿಸಿದೆ.

ಬುಧವಾರ ಗ್ರಾಮಕ್ಕೆ ಟ್ಯಾಂಕರ್‌ ನೀರು ಬಂದಿದ್ದನ್ನು ಕಂಡ ಗ್ರಾಮಸ್ಥರು ಮನೆಯಲ್ಲಿದ್ದ ಕೊಡಗಳನ್ನು ತಂದು ನೀರು ತುಂಬಿಕೊಂಡರು.

ಸಚಿವ ಆರ್.ವಿ.ದೇಶಪಾಂಡೆ ಅವರು ಎರಡು ವಾರಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಂದು ಟ್ಯಾಂಕರ್‌ ಮೂಲಕ ನೀರು ಪೂರೈಸಲು ಆರಂಭಿಸಲಾಗಿತ್ತು. ಆದರೆ, ಆ ನೀರು ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಸ್ಥರಿಗೆ ಸಾಕಾಗುತ್ತಿರಲಿಲ್ಲ. ಇದರ ಜೊತೆಗೆ ಖಾಸಗಿ ಕೊಳವೆಬಾವಿ ಮೂಲಕ ನೀರು ಪಡೆಯಲು ಮಾಸಿಕ ಬಾಡಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇಷ್ಟು ದಿನ ನೀರು ಪೂರೈಸುತ್ತಿದ್ದ ಕೊಳವೆಬಾವಿ ಮಾಲೀಕರು ಸೋಮವಾರ (ಜುಲೈ 15)ದಿಂದ ಕರಾರು ಮುಗಿದಿದ್ದರಿಂದ ನೀರು ಕೊಡುವುದಿಲ್ಲ ಎಂದು ಹೇಳಿದ್ದರು.

ADVERTISEMENT

ಇದರಿಂದ ಕಂಗಾಲಾದ ಮಹಿಳೆಯರು ಊರಿನಿಂದ ದೂರ ಇರುವ ಜಲಮೂಲಗಳನ್ನು ಹುಡುಕಿಕೊಂಡು ಹೊರಟಿದ್ದರು. ಈ ಕುರಿತು ಮಂಗಳವಾರದ ಸಂಚಿಕೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ., ಅವರು ಮತ್ತೊಂದು ಟ್ಯಾಂಕರ್‌ ನೀರನ್ನು ಆರಂಭಿಸುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್‌ಗೆ ನಿರ್ದೇಶನ ನೀಡಿದ್ದರು. ಟ್ಯಾಂಕರ್‌ ಬಂದ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಬುಧವಾರ ಟ್ಯಾಂಕರ್‌ ನೀರು ಪೂರೈಕೆ ಆರಂಭವಾಯಿತು.

ಈ ಕುರಿತು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥ ಮಹಾಂತೇಶ, ‘ನೀರಿನ ಸಮಸ್ಯೆ ಬಹಳ ಇದ್ದುದರಿಂದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ಬಿಟ್ಟು ನೀರು ತುಂಬಬೇಕಿತ್ತು. ಇದೀಗ ಸ್ವಲ್ಪ ನಿರಾಳವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.