ADVERTISEMENT

ತೆರಿಗೆ ಸಂಗ್ರಹಕ್ಕೆ ವರವಾದ ‘ಅಭಿಯಾನ’: ಬೊಕ್ಕಸಕ್ಕೆ ಹರಿದು ಬಂತು ₹ 7.57 ಕೋಟಿ

ಎರಡು ತಿಂಗಳಲ್ಲಿ ಪಂಚಾಯಿತಿಗಳ ಬೊಕ್ಕಸಕ್ಕೆ ಹರಿದು ಬಂತು ₹ 7.57 ಕೋಟಿ

ಬಸೀರ ಅಹ್ಮದ್ ನಗಾರಿ
Published 7 ಫೆಬ್ರುವರಿ 2026, 2:33 IST
Last Updated 7 ಫೆಬ್ರುವರಿ 2026, 2:33 IST
ಕಲಬುರಗಿಯ ಕಲ್ಲಹಂಗರಗಾದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ತೆರಿಗೆ ಸಂಗ್ರಹದಲ್ಲಿ ನಿರತರಾಗಿರುವುದು
ಕಲಬುರಗಿಯ ಕಲ್ಲಹಂಗರಗಾದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ತೆರಿಗೆ ಸಂಗ್ರಹದಲ್ಲಿ ನಿರತರಾಗಿರುವುದು   

ಕಲಬುರಗಿ: ಅತಿವೃಷ್ಟಿ, ಪ್ರವಾಹ, ಬೆಳೆ ನಷ್ಟದ ಹೊರತಾಗಿಯೂ ಜಿಲ್ಲೆಯ 261 ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆ ಸಂಗ್ರಹದಲ್ಲಿ ಈ ಸಲ ಚುರುಕಿನ ಪ್ರಗತಿ ದಾಖಲಿಸಿವೆ. 2025–26ನೇ ಆರ್ಥಿಕ ವರ್ಷದಲ್ಲಿ ಫೆಬ್ರುವರಿ 4ರ ಅಂತ್ಯಕ್ಕೆ ಪಂಚಾಯಿತಿಗಳ ಬೊಕ್ಕಸಕ್ಕೆ ಒಟ್ಟು ₹ 22.42 ಕೋಟಿ ವರಮಾನ ಹರಿದುಬಂದಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 261 ಗ್ರಾಮ ಪಂಚಾಯಿತಿಗಳಿಂದ ₹ 37.43 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಈ ಪೈಕಿ 10 ತಿಂಗಳಲ್ಲಿ ಶೇ 60ರಷ್ಟು ಪ್ರಗತಿ ಸಾಧಿಸಿದೆ. 2024–25ನೇ ಸಾಲಿನಲ್ಲಿ ಜನವರಿ ಅಂತ್ಯದ ವರೆಗೆ ₹ 37.20 ಕೋಟಿ ಸಂಗ್ರಹ ಗುರಿಯಲ್ಲಿ ಶೇಕಡ 53ರಷ್ಟು (₹ 19.89 ಕೋಟಿ) ಗುರಿ ಸಾಧಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ 7ರಷ್ಟು ಪ್ರಗತಿ ದಾಖಲಿಸಿದೆ.

ಆಸ್ತಿ ಕರ ಸಂಗ್ರಹದಲ್ಲಿ ಚುರುಕಿನ ಪ್ರಗತಿಗೆ ಕಳೆದೆರಡು ತಿಂಗಳಲ್ಲಿ ನಡೆಸಿದ ವಿಶೇಷ ಅಭಿಯಾನ ಬಲ ತುಂಬಿದೆ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ 12ರ ತನಕ ಜಿಲ್ಲೆಯಲ್ಲಿ ಬರೀ ₹ 14.85 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್‌ ಮೀನಾ ಪ್ರತಿ ತಾಲ್ಲೂಕಿಗೆ ತೆರಿಗೆ ಸಂಗ್ರಹಕ್ಕೆ ಗುರಿ ನಿಗದಿಪಡಿಸಿ ಚುರುಕು ಮುಟ್ಟಿಸಿದ್ದರು. ಅದರ ಫಲವಾಗಿ ಎರಡು ತಿಂಗಳಲ್ಲಿ  ₹7.57 ಕೋಟಿ ಕರ ಪಂಚಾಯಿತಿಗಳ ಬೊಕ್ಕಸಕ್ಕೆ ಹರಿದು ಬಂದಿದೆ.

ADVERTISEMENT

ಅಫಜಲಪುರ ಅಗ್ರ: ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ತೆರಿಗೆ ಸಂಗ್ರಹದಲ್ಲಿ ಅಫಜಲಪುರ ತಾಲ್ಲೂಕು ಶೇ 80ರಷ್ಟು ಗುರಿ ಸಾಧಿಸಿ ಅಗ್ರಸ್ಥಾನ ಪಡೆದರೆ, ಕಾಳಗಿ ತಾಲ್ಲೂಕು ಶೇ 43ರಷ್ಟು ಗುರಿ ಸಾಧಿಸಿ ಜಿಲ್ಲೆಯಲ್ಲೇ ಕೊನೆಯ ಸ್ಥಾನ ಪಡೆದಿದೆ.

ಅಫಜಲಪುರ ತಾಲ್ಲೂಕು 28 ಗ್ರಾಮ ಪಂಚಾಯಿತಿಗಳಿಂದ ₹ 3.49 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಅದರಲ್ಲಿ ₹ 2.80 ಕೋಟಿ ಕರ ಸಂಗ್ರಹಿಸಿದೆ. ಕಾಳಗಿ 19 ಪಂಚಾಯಿತಿಗಳಿಂದ ₹ 1.77 ಕೋಟಿ ಕರ ಸಂಗ್ರಹದ ಗುರಿ ಹೊಂದಿದ್ದು, ಅದರಲ್ಲಿ ₹ 75.70 ಲಕ್ಷ ಸಂಗ್ರಹಿಸಿದೆ.

ಬಿಲ್‌ ಕಲೆಕ್ಟರ್‌ಗಳ ಕೊರತೆ: ಜಿಲ್ಲೆಯ 261 ಗ್ರಾಮ ಪಂಚಾಯಿತಿಗಳ ಪೈಕಿ 30 ಗ್ರಾಮ ಪಂಚಾಯಿತಿಗಳಲ್ಲಿ ಒಬ್ಬರೂ ಅಧಿಕೃತ ಬಿಲ್‌ ಕಲೆಕ್ಟರ್‌ಗಳಿಲ್ಲ. ಪಂಚಾಯಿತಿಗಳ ಸಿಬ್ಬಂದಿಯೇ ಆ ಕೆಲಸ ಮಾಡುತ್ತಿದ್ದಾರೆ. ಬಿಲ್‌ ಸಂಗ್ರಹಿಸಲು ಅಗತ್ಯ ಸಿಬ್ಬಂದಿ ದೊರೆತಿದ್ದರೆ ಬೊಕ್ಕಸಕ್ಕೆ ಇನ್ನಷ್ಟು ಆರ್ಥಿಕ ನೆರವು ಹರಿದು ಬರುತ್ತಿತ್ತು ಎಂಬುದು ಅಧಿಕಾರಿಗಳ ಅಂಬೋಣ.ಭಂವರ್‌ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ

ಭಂವರ್ ಸಿಂಗ್ ಮೀನಾ
ತೆರಿಗೆ ಸಂಗ್ರಹದಲ್ಲಿ ಈ ಸಲ ಕಳೆದ ವರ್ಷದ ಗುರಿ ಮೀರಲಿದ್ದೇವೆ. ₹30 ಕೋಟಿ ತೆರಿಗೆ ಸಂಗ್ರಹ ಅಂದಾಜಿಸಿದ್ದು ವಿಶೇಷ ಅಭಿಯಾನವನ್ನೂ ಕೈಗೊಳ್ಳಲಾಗುವುದು
ಭಂವರ್‌ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ

ಹೊರೆಯಾದ ‘ಹಿಂಬಾಕಿ’ ಭಾರ

ಜಿಲ್ಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದಲ್ಲಿ ಉತ್ತಮ ಗುರಿ ಸಾಧಿಸುತ್ತಿದ್ದರೂ ಶೇ 100 ಕರ ವಸೂಲಾತಿ ಕನಸು ಸಾಕಾರಗೊಂಡಿಲ್ಲ. 261 ಗ್ರಾಮ ಪಂಚಾಯಿತಿಗಳಲ್ಲಿ ₹ 124 ಕೋಟಿಗಳಷ್ಟು ದೊಡ್ಡ ಮೊತ್ತ ವಸೂಲಿಗೆ ಬಾಕಿ ಉಳಿದಿದೆ. ಇದರಿಂದ ಹಿಂಬಾಕಿ ಭಾರಕ್ಕೆ ಸಿಲುಕಿ ಜಿಲ್ಲೆಯ ಪಂಚಾಯಿತಿಗಳು ಅಭಿವೃದ್ಧಿಗೆ ಏದುಸಿರು ಬಿಡುತ್ತಿವೆ. ‘

ಹಿಂಬಾಕಿ ವಸೂಲಾತಿಗೆ ಪಂಚತಂತ್ರ ತಂತ್ರಾಂಶದ ಮೂಲಕವೇ ಸ್ವಯಂಚಾಲಿತ ನೋಟಿಸ್‌ ಜಾರಿಗೆ ಕ್ರಮಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರಿಷ್ಠ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ 200 ಮಂದಿಗೆ ನೋಟಿಸ್‌ ನೀಡಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.