ADVERTISEMENT

ಕಮಲಾಪುರ: ಶಾಲೆಯ ಚಹರೆ ಬದಲಿಸಿದ ಶಿಕ್ಷಕ

ಗೋಗಿ (ಕೆ) ಶಾಲೆ: ಮಕ್ಕಳ ಮನಗೆದ್ದ ಉದಯಕುಮಾರ ಬಿ. ಸೂರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 5:12 IST
Last Updated 5 ಸೆಪ್ಟೆಂಬರ್ 2023, 5:12 IST
ಜೀವಣಗಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿರುವ ಗೋಗಿ (ಕೆ) ಶಾಲೆ ಮಕ್ಕಳು
ಜೀವಣಗಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿರುವ ಗೋಗಿ (ಕೆ) ಶಾಲೆ ಮಕ್ಕಳು   

ತೀರ್ಥಕುಮಾರ ಬೆಳಕೋಟಾ

ಕಮಲಾಪುರ: ಸರ್ಕಾರ, ಶಿಕ್ಷಣ ಇಲಾಖೆ ಎಷ್ಟೇ ಪ್ರಯತ್ನಿಸಿದರೂ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಪ್ರಮಾಣದ ಸುಧಾರಣೆ ಸಾಧಿಸಲಾಗದ ಈ ಪರಿಸ್ಥಿತಿಯಲ್ಲಿ ಅತಿಥಿ ಶಿಕ್ಷಕನ ಕ್ರಿಯಾಶೀಲತೆ ಹಾಗೂ ನಿರಂತರ ಪ್ರಯತ್ನದಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಯನ್ನೂ ಮೀರಿಸುವಂತಾಗಿದೆ.

ಹೌದು, ಕಮಲಾಪುರ ತಾಲ್ಲೂಕಿನ ಗೋಗಿ (ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೆ ಈ ಶ್ರೇಯಸ್ಸಿಗೆ ಪಾತ್ರವಾಗಿದೆ. ಈ ಶಾಲೆಯಲ್ಲಿ ಕಳೆದ 18 ತಿಂಗಳ ಹಿಂದೆ ನೇಮಕಗೊಂಡ ಉದಯಕುಮಾರ ಬಿ.ಸೂರಿ ಶೈಕ್ಷಣಿಕ ಸುಧಾರಣೆ ನಿರಂತರ ಶ್ರಮಿಸಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದ ಕ್ರಿಯಾಶೀಲ ಶಿಕ್ಷಕ.

ADVERTISEMENT

ಉದಯಕುಮಾರ ಅದೇ ಶಾಲೆ ವಿದ್ಯಾರ್ಥಿ. ಅತಿಥಿ ಶಿಕ್ಷಕರಾಗಿ ನೇಮಕಗೊಂಡ ಮೊದಲಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದಾರೆ. ಸನ್ಮಾನ ಮಾಡಿ ಸ್ಫೂರ್ತಿದಾಯಕ ಮಾತುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ತಲಾ ₹ 2 ಸಾವಿರ ದೇಣಿಗೆ‌ ಪಡೆದು, ಶಾಲೆ ಕಟ್ಟಡ ಹಾಗೂ ಕಪ್ಪುಹಲಗೆಗೆ ಬಣ್ಣ, ಎಲ್ಲ ತರಗತಿಗೆ ಗೋಡೆ ಗಡಿಯಾರ, 1, 2, 3ನೇ ತರಗತಿ ಮಕ್ಕಳಿಗೆ ಅಂಕಲಿಪಿ, 5, 6ನೇ ತರಗತಿ ಮಕ್ಕಳಿಗೆ ವಸತಿ ಶಾಲೆ ಪ್ರವೇಶ ಪರೀಕ್ಷೆ ಕೈಪಿಡಿ ಜೊತೆಗೆ ನೀರಿನ ಬಾಟಲ್‌ ಒದಗಿಸಿದ್ದಾರೆ. ವೈಯಕ್ತಿಕ ಹಣದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್ ಕಿಟ್ ಒದಗಿಸಿದ್ದಾರೆ.

ಸಂಜೆ 6ರವರೆಗೆ ಶಾಲೆಯಲ್ಲೇ ವಿದ್ಯಾರ್ಥಿಗಳ ಜೊತೆಗೆ ಕಾಲ ಕಳೆಯುವ ಇವರು ಆಟ, ಪಾಠ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮಹತ್ವದ ಪಾತ್ರ ವಹಿಸಿದ್ದಾರೆ.

ಕೆಕೆಆರ್‌ಡಿಬಿಯಿಂದ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಉಪಕರಣಗಳನ್ನು ಒದಗಿಸಲಾಗಿದ್ದು, ಅದನ್ನು ಉದಯಕುಮಾರ ಅವರೇ ನಿರ್ವಹಣೆ ಮಾಡುತ್ತಾರೆ. ಪ್ರೊಜೆಕ್ಟರ್‌ ಮೂಲಕ ಕಂಪ್ಯೂಟರ್, ದೈಹಿಕ ಶಿಕ್ಷಣ, ಇಂಗ್ಲಿಷ್, ಸಮಾಜ ವಿಜ್ಞಾನ ತರಗತಿ ನಡೆಸುತ್ತಾರೆ. ಕನ್ನಡ, ಇಂಗ್ಲಿಷ್ ವ್ಯಾಕರಣ ಬೋಧನೆ ಮಾಡಿ ಮಕಳು ನಿರರ್ಗಳವಾಗಿ ಓದುವಂತೆ ತರಬೇತುಗೊಳಿಸಲಾಗಿದೆ. ಬೇಸಿಗೆಯಲ್ಲಿ ಉಚಿತ ತರಬೇತಿ ನಡೆಸಿ ಇಂಗ್ಲಿಷ್, ಗಣಿತ ವಿಷಯ ಬೋಧನೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಶ್ವೇತಾ ತುಕಾರಾಮ ತಿಳಿಸಿದರು.

ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಮಕ್ಕಳ ಜ್ಞಾನದ ಪರಿಧಿ ವಿಸ್ತರಿಸುವಂತೆ ಮಾಡಿದ್ದಾರೆ. ಸಾಹಿತ್ಯದ ಪುಸ್ತಕಗಳು ಮಕ್ಕಳಿಂದ ಓದಿಸಿ ಅವರಿಂದಲೇ ವಿವರಿಸುವುದು, ಗುರುರಾಜ ಕರ್ಜಗಿ ಸೇರಿದಂತೆ ಪ್ರಮುಖ ಶಿಕ್ಷಣ ತಜ್ಞರ, ವಿಚಾರವಾದಿಗಳ ಮಾತುಗಳನ್ನು ಕೇಳಿಸಿ ಮಕ್ಕಳಲ್ಲಿ ಧನಾತ್ಮಕ ಆಲೋಚನೆ ಅಳವಡಿಸಿಕೊಳ್ಳುವಂತೆ ಮಾಡಿದ್ದಾರೆ. ದೇಶ ಭಕ್ತಿ ಹಾಗೂ ಮಕ್ಕಳ ಚಲನಚಿತ್ರ ತೋರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಿಂದಾಗುವ ಅವಾಂತರಗಳ ಬಗ್ಗೆ ಪರಿಜ್ಞಾನ ಮೂಡಿಸಲಾಗಿದೆ.

‘ಜೀವಣಗಿ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಮಕ್ಕಳನ್ನು ಕರೆದೊಯ್ದು ಪುಸ್ತಕಗಳನ್ನು ಪರಿಚಯಿಸಲಾಗುತ್ತಿತ್ತು. ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ಶಾಲೆಯಲ್ಲೇ ಚಿಕ್ಕದೊಂದು ಗ್ರಂಥಾಲಯ ವ್ಯವಸ್ಥೆ ಮಾಡಿದ್ದೇನೆ. ಆಧುನಿಕ ಚುನಾವಣೆ ವ್ಯವಸ್ಥೆ ಮೂಲಕ ಶಾಲಾ ಸಂಸತ್ತು ರಚಿಸಿದ್ದೇವೆ. ಇತಿಹಾಸದ ಕಲ್ಪನೆ ಹಾಗೂ ಆಸಕ್ತಿ ಹೆಚ್ಚಿಸಲು ಸಮೀಪದ ಐತಿಹಾಸಿಕ ತಾಣಗಳಿಗೆ ತೆರಳಿ ಮಾಹಿತಿ ಒದಗಿಸಿದ್ದೇನೆ. ಪ್ರವಾಸ ಕೊಂಡ್ಯೊಯ್ಯುವಾಗ ರಸ್ತೆಯುದ್ದಕ್ಕೂ ಇರುವ ರಸ್ತೆ ಸುರಕ್ಷತಾ ನಿಯಮದ ಫಲಕಗಳು, ಸಂಕೇತಗಳನ್ನು ಮಕ್ಕಳಿಗೆ ತೋರಿಸಿ ಅರ್ಥ ವಿವರಿಸಿತ್ತೇನೆ’ ಎನ್ನುತ್ತಾರೆ ಉದಯಕುಮಾರ ಬಿ. ಸೂರಿ.

‘ಸಮುದಾಯದ ಜೊತೆಗೂಡಿ ಶಾಲೆಯ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ನಾವೂ ಸಹಕಾರ ನೀಡುತ್ತಿದ್ದೇವೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಧನ್ನೂರ, ಮುಖ್ಯ ಶಿಕ್ಷಕಿ ರತ್ನಮ್ಮ.

ಶಿಕ್ಷಕರು ಮಕ್ಕಳೊಂದಿಗೆ ಶಾಲೆ ಆವರಣದಲ್ಲಿ ಸಸಿ ನೆಡುತ್ತಿರುವುದು
ಉದಯಕುಮಾರ
ಶಾಲೆ ಸಮುದಾಯದ ಭಾಗ. ಶೈಕ್ಷಣಿಕ ಸುಧಾರಣೆ ಮಾಡಬೇಕಾದರೆ ಶಾಲೆಯನ್ನು ಸಮುದಾಯದತ್ತ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ
ಉದಯಕುಮಾರ ಬಿ.ಸೂರಿ ಶಿಕ್ಷಕ
ಉದಯಕುಮಾರ ಸೂರಿ ನೇಮಕಗೊಂಡ ದಿನದಿಂದ ಶಾಲೆಯ ಚಿತ್ರಣವೇ ಬೇರೆಯಾಗಿದೆ. ಗ್ರಾಮದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಿದೆ
–ರಾಜೇಂದ್ರ ಬಿ. ಅಮ್ಮಣ ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.