ADVERTISEMENT

ಶಿಕ್ಷಕನ ಅಪಹರಿಸಿ ದರೋಡೆ: ನಾಲ್ವರ ಬಂಧನ

₹ 2.50 ಕೋಟಿ ಮೌಲ್ಯದ ನಾಯಿ ಸಾಯಿಸಿದ್ದಾಗಿ ನೆಪ ಹೇಳಿ ಅಪಹರಣ; ಹಣಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:40 IST
Last Updated 20 ಜುಲೈ 2025, 6:40 IST
ಅನಿಲ್‌ಕುಮಾರ್
ಅನಿಲ್‌ಕುಮಾರ್   

ಕಲಬುರಗಿ: ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಶಿಕ್ಷಕರೊಬ್ಬರನ್ನು ಮಾರ್ಗ ಮಧ್ಯ ಅಪಹರಿಸಿ ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಫರಹತಾಬಾದ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಹಾಬಾದ್ ತಾಲ್ಲೂಕಿನ ಕಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈರಣ್ಣ ಶರಣಬಸಪ್ಪ ಅಪಹರಣಕ್ಕೆ ಒಳಗಾದವರು. ಅಪಹರಣ ಆರೋಪದಡಿ ಕೇಂದ್ರ ಕಾರಾಗೃಹ ಸಮೀಪದಲ್ಲಿ ವಾಸವಿದ್ದ ಅನಿಲ್‌ಕುಮಾರ ಹಡಪದ, ತಾಡತೆಗನೂರಿನ ಸುಭಾಷ ಪೂಜಾರಿ, ಮಹೇಶ ಬಡಿಗೇರ ಹಾಗೂ ಸೀತನೂರಿನ ಸಂತೋಷ ದೇವರಮನಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

‘ಈರಣ್ಣ ಅವರು ಫರಹತಾಬಾದ್‌ನಲ್ಲಿ ಇದ್ದಾಗ ಆಗಾಗ ಅನಿಲ್‌ ಅವರ ಕಟಿಂಗ್ ಶಾಪ್‌ಗೆ ಬರುತ್ತಿದ್ದರಿಂದ ಪರಿಚಯವಾಗಿದ್ದರು. ಅವರ ಬಳಿ ಹಣ ಇರುವುದು ಸಹ ಅನಿಲ್‌ಗೆ ಗೊತ್ತಾಗಿತ್ತು. ಸಾಲದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅನಿಲ್, ತನ್ನ ಸ್ನೇಹಿತರ ಜತೆಗೂಡಿ ಈರಣ್ಣ ಅವರ ಅಪಹರಣ ಮತ್ತು ದರೋಡೆಗೆ ಪ್ಲಾನ್ ಮಾಡಿದ್ದರು. ಕಡಿಹಳ್ಳಿ ಶಾಲೆಗೆ ಬೈಕ್ ಮೇಲೆ ತೆರಳುತ್ತಿದ್ದ ಈರಣ್ಣ ಅವರನ್ನು ಕಾರಿನಲ್ಲಿ ಬಂದು ಮಂಕಿ ಕ್ಯಾಪ್ ಧರಿಸಿದ್ದ ನಾಲ್ವರೂ ಅಡ್ಡಗಟ್ಟಿದ್ದರು. ಈರಣ್ಣ ಅವರ ಕೈಕಾಲುಗಳನ್ನು ಹಿಡಿದೆತ್ತಿಕೊಂಡು ಕಾರಿನಲ್ಲಿ ಹಾಕಿಕೊಂಡು ಅಪಹರಿಸಿದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘₹ 2.50 ಕೋಟಿ ಮೌಲ್ಯದ ನಾಯಿ ಮೇಲೆ ಬೈಕ್ ಹತ್ತಿಸಿ ಸಾಯಿಸಿದ್ದರಿಂದ ನಿನ್ನನ್ನು ಅಪಹರಿಸಿ ಹೊಡೆಯಲು ಹೇಳಿದ್ದಾರೆ. ₹ 50 ಲಕ್ಷ ಕೊಟ್ಟರೆ ಬಿಡುತ್ತೇವೆ ಎಂದು ಈರಣ್ಣ ಅವರಿಗೆ ಹೆದರಿಸಿದ್ದರು. ಮೊಬೈಲ್ ಕಿತ್ತುಕೊಂಡು ಆತನ ಪತ್ನಿಗೆ ಫೋನ್ ಮಾಡಿಸಿ, ಚಿನ್ನದ ಬಿಸ್ಕೆಟ್‌ ಸಿಕ್ಕಿದೆ ₹ 30 ಲಕ್ಷ ಹಣ ಕಳುಹಿಸುವಂತೆಯೂ ಹೇಳಿಸಿದ್ದರು. ಇದನ್ನು ನಿರ್ಲಕ್ಷಿಸಿದ ಆತನ ಪತ್ನಿ, ಹಣವನ್ನು ಕಳುಹಿಸಲಿಲ್ಲ’ ಎಂದರು.

‘ಈರಣ್ಣ ಅವರನ್ನು ಕಾರಿನಲ್ಲಿ ವಿಜಯಪುರ, ಬಾಗಲಕೋಟೆ ಕಡೆಗೆ ಕರೆದೊಯ್ದರು. ಬಾಗಲಕೋಟೆಯ ಬೀಳಗಿಯಲ್ಲಿ ಎಟಿಎಂನಿಂದ ₹ 5 ಸಾವಿರ ಡ್ರಾ ಮಾಡಿಕೊಂಡು ಬಂದ ಈರಣ್ಣ, ಅದನ್ನು ಆರೋಪಿಗಳ ಕೈಗೆ ಕೊಟ್ಟರು. ಅದೇ ವೇಳೆ ಆರೋಪಿಗಳು ಮೈಮರೆಯುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡರು’ ಎಂದು ಹೇಳಿದರು.‌

‘ಈರಣ್ಣನಿಂದ ಎಟಿಎಂ ಕಿತ್ತುಕೊಂಡು ಗೋವಾಗೆ ಹೋದ ಆರೋಪಿಗಳು, ಅಲ್ಲಿ ₹ 5 ಸಾವಿರ ಮೌಲ್ಯದ ಮದ್ಯವನ್ನು ಖರೀದಿಸಿದರು. ಹಣ ಇಲ್ಲವೆಂದು ಪೆಟ್ರೋಲ್ ಬಂಕ್, ಬೇರೊಬ್ಬರಿಗೆ ಆನ್‌ಲೈನ್‌ನ ಮೂಲಕ ಹಣ ವರ್ಗಾಯಿಸಿ ನಗದು ಹಣವನ್ನು ಪಡೆದಿದ್ದರು. ಆರೋಪಿಗಳನ್ನು ಬಂಧಿಸಿ ಮೊಬೈಲ್, ಚಿನ್ನದ ಉಂಗುರ, ಕಾರು ಹಾಗೂ ನಗದು ಹಣವನ್ನೂ ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಎಸಿಪಿ ಡಿ.ಜಿ. ರಾಜಣ್ಣ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸಿಸಿದರು.

ಮಹೇಶ
ಸುಭಾಷ ಪೂಜಾರಿ
ಸಂತೋಷ ದೇವರಮನಿ
ಸೈಯದ್ ಹಮೀದ್

ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಅಂತರರಾಜ್ಯ ‌ಕಳ್ಳನ ಬಂಧನದಿಂದ ವಶಕ್ಕೆ ಪಡೆಯಲಾದ ಚಿನ್ನಾಭರಣಗಳನ್ನು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹಾಗೂ ಸಿಬ್ಬಂದಿ ವೀಕ್ಷಿಸಿದರು             

ಚಿನ್ನಾಭರಣ ತಯಾರಿಕಾ ಮಳಿಗೆ ದರೋಡೆ ಪ್ರಕರಣದ ಆರೋಪಿಗಳ ಪತ್ತೆಗೆ ಮೂರು ತಂಡಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು
ಶರಣಪ್ಪ ಎಸ್‌.ಡಿ. ಪೊಲೀಸ್ ಕಮಿಷನರ್

ಅಂತರರಾಜ್ಯ ಕಳ್ಳನ ಬಂಧನ: ₹ 11 ಲಕ್ಷ ಸ್ವತ್ತು ಜಪ್ತಿ:

ಹೈದರಾಬಾದ್‌ನಿಂದ ಕಲಬುರಗಿಗೆ ಬಂದು ಹಗಲು ವೇಳೆ ಮನೆಗಳಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಅಂತರರಾಜ್ಯ ಕಳ್ಳನನ್ನು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ‘ತೆಲಂಗಾಣದ ಹೈದರಾಬಾದ್‌ ನಿವಾಸಿ ಸೈಯದ್ ಹಮೀದ್ (47) ಬಂಧಿತ ಆರೋಪಿ. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ 7 ಕಳ್ಳತನ ಪ್ರಕರಣಗಳಿಂದ ₹ 11.07 ಲಕ್ಷ ಮೌಲ್ಯದ 123 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ತೆಲಂಗಾಣದಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ತಿಳಿಸಿದರು. ‘ಆರೋಪಿಯು ಹೈದರಾಬಾದ್‌ನಿಂದ ಗೂಡ್ಸ್‌ ರೈಲಿನಲ್ಲಿ ತನ್ನ ಕಪ್ಪು ಬಣ್ಣದ ಸ್ಕೂಟರ್ ತಂದು ತಾನೂ ರೈಲಿನಲ್ಲಿ ಪ್ರಯಾಣಿಸಿ ಕಲಬುರಗಿಗೆ ಬರುತ್ತಿದ್ದ. ಎರಡ್ಮೂರು ದಿನಗಳು ನಗರದಲ್ಲಿ ಇದ್ದು ಒಂಟಿಯಾದ ಮತ್ತು ಸಿಸಿಟಿವಿ ಕ್ಯಾಮೆರಾ ಇಲ್ಲದ ಮನೆಗಳನ್ನು ಪತ್ತೆ ಮಾಡುತ್ತಿದ್ದ. ಆ ಮನೆಗಳಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಕೀ ಮುರಿದು ಕಳ್ಳತನ ಮಾಡಿ ಸ್ಕೂಟರ್ ರೈಲಿನಲ್ಲಿ ಹಾಕಿ ವಾಪಸ್ ಹೈದರಾಬಾದ್‌ಗೆ ಹೋಗುತ್ತಿದ್ದ’ ಎಂದರು. ‘ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ಮಾತ್ರವೇ 7 ಮನೆಗಳ ಕಳ್ಳತನ ಮಾಡಿದ್ದ. ಕಳುವಾದ ಮನೆಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಕಪ್ಪು ಬಣ್ಣದ ಸ್ಕೂಟರ್ ಓಡಾಡಿದ್ದರ ದೃಶ್ಯಗಳು ಸೆರೆಯಾಗಿದ್ದವು. ಅವುಗಳ ಜಾಡು ಹಿಡಿದು ಹೋದಾಗ ಆರೋಪಿ ಸೈಯದ್ ಸಿಕ್ಕಿಬಿದ್ದಿದ್ದಾನೆ’ ಎಂದು ಹೇಳಿದರು.

₹ 20 ಲಕ್ಷ ಸುಲಿಗೆ ಪ್ರಕರಣ: 9 ಆರೋಪಿಗಳ ಬಂಧನ:

‘ನಂದಿಕೂರಿನ ಮಲ್ಲಯ್ಯ ಸ್ವಾಮಿ ಅವರಿಂದ ₹ 20 ಲಕ್ಷ ಸುಲಿಗೆ ಮಾಡಿದ ಪ್ರಕರಣದಲ್ಲಿ ಒಂಬತ್ತು ಮಂದಿ ಆರೋಪಗಳನ್ನು ಬಂಧಿಸಿ ₹ 5 ಲಕ್ಷ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಹೇಳಿದರು. ‘ಸ್ವಾಮಿ ಅವರನ್ನು ಅಪಹರಿಸಿದ ಆರೋಪಿಗಳು ಪತ್ನಿ ಖಾತೆಯಿಂದ ₹ 10 ಲಕ್ಷ ಹಾಗೂ ಸಂತ್ರಸ್ತರ ಖಾತೆಯಿಂದ ₹ 10 ಲಕ್ಷ ವರ್ಗಾಯಿಸಿಕೊಂಡು ಸುಲಿಗೆ ಮಾಡಿದ್ದರು. ಅದರಲ್ಲಿ ಪ್ರಮುಖ ಆರೋಪಿ ₹ 12 ಲಕ್ಷ ಪಡೆದಿದ್ದು ಉಳಿದವರು ₹ 8 ಲಕ್ಷ ತೆಗೆದುಕೊಂಡಿದ್ದರು. ₹ 8 ಲಕ್ಷ ಪಡೆದವರಿಂದ ₹ 5 ಲಕ್ಷ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು ಸುಲಿಗೆಯ ಹಣವನ್ನು ಖರ್ಚು ಮಾಡಿದ್ದಾಗಿ ಹೇಳುತ್ತಿದ್ದಾನೆ. ಪ್ರಕರಣವು ವಿಚಾರಣೆಯ ಹಂತದಲ್ಲಿದೆ’ ಎಂದರು.

ಬಸ್‌ನಲ್ಲಿ ಚಿನ್ನದ ಸರ ಕಳವು:

ಬಸ್‌ನಲ್ಲಿ ವೃದ್ಧೆ ಪ್ರಯಾಣಿಕರೊಬ್ಬರು ಬ್ಯಾಗ್‌ನಲ್ಲಿ ಇರಿಸಿದ್ದ ಚಿನ್ನದ ಸರ ಕದ್ದ ಪ್ರಕರಣವು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಡೇಪೂರ ಕಾಲೊನಿಯ ವೃದ್ಧೆ ಪಾರ್ವತಿ ಶಂಕ್ರೆಪ್ಪ ಚಿನ್ನದ ಸರ ಕಳೆದುಕೊಂಡವರು. ಪಾರ್ವತಿ ಅವರು ಸೂಪರ್ ಮಾರ್ಕೆಟ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಾ ಖರ್ಗೆ ಪೆಟ್ರೋಲ್ ಬಂಕ್ ಬಳಿ ನಿಂತಿದ್ದರು. ಅಪರಿಚಿತ ಮಹಿಳೆಯೊಬ್ಬರ ಸಲಹೆಯಂತೆ ಪಾರ್ವತಿ ಅವರು ಚಿನ್ನದ ಸರವನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡರು. ಬಸ್‌ನಲ್ಲಿ ಹತ್ತಿದ್ದಾಗ ₹ 60 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಂಜಾ ಜಪ್ತಿ: ಒಬ್ಬ ವಶಕ್ಕೆ:

ಗುಬ್ಬಿ ಕಾಲೊನಿಯ ದೊಡ್ಡ ನಾಲೆಯ ಸಮೀಪ ಗಾಂಜಾ ಮಾರುತ್ತಿದ್ದ ಒಬ್ಬ ಆರೋಪಿಯನ್ನು ಎಂ.ಬಿ. ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಪುನಗರದ ನಿವಾಸಿ ಸಿದ್ಧಾರ್ಥ ಸಾಳೆ (27) ಗಾಂಜಾ ಮಾರುತ್ತಿದ್ದ ಆರೋಪಿ. ಆತನಿಂದ ₹ 51 ಸಾವಿರ ಮೌಲ್ಯದ 515 ಗ್ರಾಂ ಗಾಂಜಾ ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.