ADVERTISEMENT

ಆಳಂದ: ಶಾಲೆಗಳತ್ತ ವಿದ್ಯಾರ್ಥಿಗಳ ನಿರಾಸಕ್ತಿ: ಮನೆಗಳಿಗೆ ಶಿಕ್ಷಕರ ಭೇಟಿ’

​ಪ್ರಜಾವಾಣಿ ವಾರ್ತೆ
Published 12 ಮೇ 2025, 15:02 IST
Last Updated 12 ಮೇ 2025, 15:02 IST
ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವುದು
ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವುದು   

ಆಳಂದ: ತಾಲ್ಲೂಕಿನ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಕುಸಿತ ಕಂಡ ಪರಿಣಾಮ ಶಾಲಾ ಶಿಕ್ಷಣ ಇಲಾಖೆಯು ಮೇ 12ರಿಂದ ಅನುತ್ತೀರ್ಣರಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ನೋಂದಾಯಿತರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆಯನ್ನು ಸೋಮವಾರ ವಿವಿಧ ಪ್ರೌಢಶಾಲೆಗಳಲ್ಲಿ ಆರಂಭಿಸಲಾಯಿತು.

ಪರಿಹಾರ ಬೋಧನೆಗೆ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಕಾಣುತ್ತಿದೆ. ಹೀಗಾಗಿ ಮೊದಲ ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಬೆರಳೆಣಿಕೆಯಷ್ಟಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗಯ್ಯ ಶೆಟ್ಟಿ ಅವರು ಬೆಳಿಗ್ಗೆ ಸೂಂಟನೂರು, ಕಡಗಂಚಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದರು. ಈ ವೇಳೆ ಇಲಾಖೆ ಆದೇಶದನ್ವಯ ವಿಷಯ ಶಿಕ್ಷಕರು ಶಾಲೆಗೆ ಬಂದರು. ಆದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಶಾಲೆಯತ್ತ ಸುಳಿಯಲಿಲ್ಲ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಮನವೊಲಿಸಿ, ಕರೆ ತಂದು ನಂತರ ತರಗತಿ ಆರಂಭಿಸಿದರು. ಮೊದಲ ದಿನ ಬಹುತೇಕ ಶಾಲೆಗಳಲ್ಲಿ ಕನ್ನಡ ಹಾಗೂ ಗಣಿತ ವಿಷಯ ಬೋಧನೆ ನಡೆಯಿತು.

ADVERTISEMENT

ಆಳಂದ ತಾಲ್ಲೂಕಿನ ಅಳಂಗಾ, ಹೊದಲೂರು, ಖಜೂರಿ, ಭೂಸನೂರು, ಕಡಗಂಚಿ, ಧುತ್ತರಗಾಂವ, ಕಿಣಿಸುಲ್ತಾನ, ಸರಸಂಬಾ, ತಡಕಲ, ನೆಲ್ಲೂರು, ಮಾಡಿಯಾಳ, ಹಿರೋಳ್ಳಿ, ಚಿತಲಿ, ಯಳಸಂಗಿ ಪ್ರೌಢಶಾಲೆ ಸೇರಿದಂತೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ, ಜೆಪಿ ಪ್ರೌಢಶಾಲೆ, ದಿಗಂಬರ ಜೈನ ಪ್ರೌಢಶಾಲೆ, ಎಪಿಎಂಜಿ, ಅಲ್‌ ಅಮೀನ್‌ ಶಾಲೆಗಳಲ್ಲಿ ವಿಶೇಷ ತರಗತಿಯನ್ನು ಶಿಕ್ಷಕರು ಕೈಗೊಂಡರು. ಆದರೆ ಕೊಡಲ ಹಂಗರಗಾ ಹಾಗೂ ಆಳಂದ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆ ಸೇರಿದಂತೆ ಕೆಲವು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿಶೇಷ ತರಗತಿ ನಡೆಯಲಿಲ್ಲ.

ವಿದ್ಯಾರ್ಥಿಗಳ ನಿರಾಸಕ್ತಿ:

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರಿಹಾರ ಬೋಧನೆಗೆ ಹಾಜರಾಗಲು ನಿರಾಸಕ್ತಿ ಮತ್ತು ಮುಜಗರ ಕಾಣುತ್ತಿದೆ. ಹಲವು ಶಾಲೆಗಳಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಆಳಂದದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಒಟ್ಟು 59 ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾದವರು ಇಬ್ಬರು ಮಾತ್ರ. ಪರಿಹಾರ ಬೊಧನೆಗೆ ಹಾಜರಾದವರ ಸಂಖ್ಯೆ ಕೇವಲ 15 ವಿದ್ಯಾರ್ಥಿಗಳು ಮಾತ್ರ. ಖಜೂರಿ ಪ್ರೌಢಶಾಲೆಯಲ್ಲಿ 95 ರಲ್ಲಿ ಅನುತೀರ್ಣರಾದವರು 82 ವಿದ್ಯಾರ್ಥಿಗಳು. ತರಗತಿಗೆ ಹಾಜರಾಗಿದ್ದು ಕೇವಲ ಇಬ್ಬರು ಮಾತ್ರ. ತಾಲ್ಲೂಕಿನ 20 ಸರ್ಕಾರಿ ಹಾಗೂ 6 ಅನುದಾನಿತ ಶಾಲೆಗಳಲ್ಲಿ ಶೇ 30ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ–2ಕ್ಕೆ ನೋಂದಾಯಿತರಾದರೂ ಪರಿಹಾರ ಬೋಧನೆಗಳಿಗೆ ಬರಲು ಹಿಂದೇಟು ಹಾಕುತ್ತಿರುವುದು ಶಿಕ್ಷಕರಿಗೂ ಸಹ ತಲೆನೋವು ತಂದಿದೆ. ಅಲ್ಲದೆ ಬೇಸಿಗೆ ಧಗೆಯು ಹೆಚ್ಚಿರುವುದರಿಂದ ವಿಶೇಷ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆ ಕಾಣುತ್ತಿದೆ. ಮೇ 26ರಿಂದ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 25ರವರಗೆ ಎಲ್ಲ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ಮುಂದುವರಿಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.