ADVERTISEMENT

ಗೇಟ್‌ ಬಳಿಯೇ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 15:29 IST
Last Updated 8 ಆಗಸ್ಟ್ 2021, 15:29 IST
ಕಲಬುರ್ಗಿಯಲ್ಲಿ ಭಾನುವಾರ ಶರಣಬಸವೇಶ್ವರ ದೇವಸ್ಥಾನದ ಗೇಟ್‌ ಮುಚ್ಚಿದ್ದರಿಂದ ಭಕ್ತರು ರಸ್ತೆ ಪಕ್ಕದಲ್ಲೇ ಪೂಜೆ ಸಲ್ಲಿಸಿದರು
ಕಲಬುರ್ಗಿಯಲ್ಲಿ ಭಾನುವಾರ ಶರಣಬಸವೇಶ್ವರ ದೇವಸ್ಥಾನದ ಗೇಟ್‌ ಮುಚ್ಚಿದ್ದರಿಂದ ಭಕ್ತರು ರಸ್ತೆ ಪಕ್ಕದಲ್ಲೇ ಪೂಜೆ ಸಲ್ಲಿಸಿದರು   

ಕಲಬುರ್ಗಿ: ಕೊರೊನಾ ಮೂರನೇ ಅಲೆಯನ್ನು ನಿರ್ಬಂಧಿಸುವ ಸಂಬಂಧ ಜಾರಿಗೊಳಿಸಿದ ವಾರಾಂತ್ಯ ಕರ್ಫ್ಯೂ ಕಾರಣ, ನಗರದ ಬಹುಪಾಲು ದೇವಸ್ಥಾನಗಳಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ದೇವರ ದರ್ಶನ ಬಂದ್‌ ಮಾಡಲಾಯಿತು.

ಭಾನುವಾರ ಭೀಮನ ಅಮಾವಾಸ್ಯೆ ಕೂಡ ಇದ್ದುದರಿಂದ ಬೆಳಿಗ್ಗೆ ದೇವಸ್ಥಾನಗಳಲ್ಲಿ ಎಂದಿಗಿಂತ ಹೆಚ್ಚು ಭಕ್ತರು ಸೇರಿದರು. ಹಲವು ಮಹಿಳೆಯರು ಮನೆಯಲ್ಲಿ ಪತಿಯ ಪಾದಪೂಜೆ ಮುಗಿಸಿದ ಬಳಿಕ ಕುಟುಂಬ ಸಮೇತ ಬಂದು ದೇವರ ದರ್ಶನ ಪಡೆದರು.‌‌ ಕೋರಂಟಿ ಹನುಮಾನ್‌ ದೇವಸ್ಥಾನದಲ್ಲಿ ಮಾತ್ರ ದಿನವಿಡೀ ದರ್ಶನಕ್ಕೆ ಅವಕಾಶ ನೀಡಲಾಯಿತು.

ಮಧ್ಯಾಹ್ನದ 2ರ ನಂತರ ಕರ್ಫ್ಯೂ ಇದ್ದ ಕಾರಣ ಬಹುಪಾಲು ದೇವಸ್ಥಾನಗಳನ್ನು ಬಂದ್ ಮಾಡಲಾಯಿತು. ಬಿದ್ದಾಪುರ ಕಾಲೊನಿಯ ಕಾಶಿ ವಿಶ್ವನಾಥ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ, ಖೂಬಾ ಪ್ಲಾಟ್‌ನಲ್ಲಿರುವ ಶಿವಾಲಯ, ಲೋಹಾರ್‌ ಗಲ್ಲಿ, ಗೋದುತಾಯಿ ಕಾಲೊನಿ, ಶಹಾಬಜಾರ್‌, ಕೈಲಾಸ ನಗರ, ಗಂಗಾನಗರ, ರೇವಣಸಿದ್ಧೇಶ್ವರ ಕಾಲೊನಿ ಸೇರಿದಂತೆ ಎಲ್ಲ ಮಂದಿರಗಳಲ್ಲೂ ಬೆಳಿಗ್ಗೆ ಪ್ರವೇಶ ನೀಡಲಾಯಿತು. ಸಂಜೆಗೆ ಅರ್ಚಕರು ಪೂಜೆ ನೆರವೇರಿಸಿದರು.

ADVERTISEMENT

ಆದರೆ, ಇಲ್ಲಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಗೇಟ್‌ ಬಂದ್‌ ಮಾಡಲಾಯಿತು. ಹಲವು ಭಕ್ತರು ರಸ್ತೆ ಬದಿಯೇ ನಿಂತುಕೊಂಡು ಕೈ ಮುಗಿದರು. ಗೇಟ್‌ ಬಳಿಯೇ ಕಾಯಿ ಒಡೆದು, ಕರ್ಪೂರ ಬೆಳಕಿದರು.

ಭಾನುವಾರದಿಂದಲೇ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳು ಆರಂಭವಾದ ಕಾರಣ, ಭಕ್ತರ ಸಂದಣಿ ಹೆಚ್ಚಾಗಬಹುದು ಎಂದು ಮುಂಜಾಗ್ರತೆಯಿಂದ ಗೇಟ್‌ ಬಂದ್‌ ಮಾಡಲಾಯಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.