ADVERTISEMENT

ಕಲಬುರಗಿ: ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜು

ಇಂದು ಬಾಗಿಲು ತೆರೆಯಲಿರುವ ಶಾಲೆಗಳು: ಮಕ್ಕಳ ಸ್ವಾಗತ 31ಕ್ಕೆ

ಪ್ರಜಾವಾಣಿ ವಿಶೇಷ
Published 29 ಮೇ 2024, 5:08 IST
Last Updated 29 ಮೇ 2024, 5:08 IST
ಶಾಲೆಗಳು ಪ್ರಾರಂಭ ಆಗುವ ಹಿನ್ನೆಲೆಯಲ್ಲಿ ಕಲಬುರಗಿಯ ಸೂಪರ್‌ ಮಾರುಕಟ್ಟೆ ಅಂಗಡಿಯೊಂದರಲ್ಲಿ ಮಂಗಳವಾರ ಪೋಷಕರು ಮಕ್ಕಳ ಶಾಲಾ ಬ್ಯಾಗ್‌ ಖರೀದಿಸುತ್ತಿರುವುದು ಕಂಡುಬಂತು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್
ಶಾಲೆಗಳು ಪ್ರಾರಂಭ ಆಗುವ ಹಿನ್ನೆಲೆಯಲ್ಲಿ ಕಲಬುರಗಿಯ ಸೂಪರ್‌ ಮಾರುಕಟ್ಟೆ ಅಂಗಡಿಯೊಂದರಲ್ಲಿ ಮಂಗಳವಾರ ಪೋಷಕರು ಮಕ್ಕಳ ಶಾಲಾ ಬ್ಯಾಗ್‌ ಖರೀದಿಸುತ್ತಿರುವುದು ಕಂಡುಬಂತು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್   

ಕಲಬುರಗಿ: 2024–25ನೇ ಸಾಲನ್ನು ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಘೋಷಿಸಿರುವ ಶಿಕ್ಷಣ ಇಲಾಖೆ, ಬುಧವಾರ (ಮೇ 29) ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪುನರಾರಂಭಕ್ಕೆ ಸಜ್ಜಾಗಿದೆ. ಮೇ 31ರಂದು ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಉತ್ಸುಕರಾಗಿದ್ದಾರೆ.

ಬುಧವಾರ ಶಾಲಾ ಕೋಣೆ, ಆವರಣ, ಪ್ರಯೋಗಾಲಯ, ಗ್ರಂಥಾಲಯ ಹಾಗೂ ಶೌಚಾಲಯ ಸ್ವಚ್ಛತೆ ನಡೆಯಲಿದೆ. ಅಲ್ಲದೇ, ಮಳೆ ನೀರು ನಿಲ್ಲದಂತೆ ಶಾಲೆಗಳ ಛತ್ತಿನ ಮೇಲೆ ಬಿದ್ದಿರುವ ಕಸಕಡ್ಡಿ ತೆರವು ಕಾರ್ಯ ನಡೆಯಲಿದೆ.

ಶುಕ್ರವಾರ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಿದ್ದು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಆಹ್ವಾನಿಸಲಿದ್ದಾರೆ. ಈ ಸಂಭ್ರಮದಲ್ಲಿ ಪಾಲಕ–ಪೋಷಕರೂ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಸಿಹಿ ಮಾಡಲಾಗುತ್ತದೆ. ಮೊದಲ ದಿನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿದ್ಯಾರ್ಥಿಗಳ ಕೈಸೇರಲಿವೆ.

ADVERTISEMENT

‘ಜಿಲ್ಲೆಯ ಎಲ್ಲ ಶಿಕ್ಷಕರು ಬುಧವಾರವೇ ಶಾಲೆಗಳಿಗೆ ಹಾಜರಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಶಾಲೆಗಳ ಸ್ವಚ್ಛತೆ ಜೊತೆಗೆ ಮಕ್ಕಳ ಸುರಕ್ಷತೆಗೆ ಒತ್ತು ನೀಡಲು ತಿಳಿಸಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವದ ಬಗ್ಗೆ ಚರ್ಚಿಸಬೇಕು. ಇನ್ನುಳಿದಂತೆ ಶಾಲಾ ವೇಳಾಪಟ್ಟಿ, ವಿಷಯವಾರು ವಾರ್ಷಿಕ ಕ್ರಿಯಾಯೋಜನೆ, ಶಿಕ್ಷಕರ ವೇಳಾಪಟ್ಟಿ ಮತ್ತು ಶಾಲಾಭಿವೃದ್ಧಿ ಯೋಜನೆ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ತಿಳಿಸಿದರು.

ದಾಖಲಾತಿ ಆಂದೋಲನ: ಹೊಸದಾಗಿ ಪ್ರವೇಶ ಪಡೆಯುವ ಮಕ್ಕಳ ದಾಖಲಾತಿ ಜೊತೆಗೆ ವಿವಿಧ ಕಾರಣಗಳಿಂದಾಗಿ ಶಾಲೆ ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಉದ್ದೇಶದಿಂದ ಶಾಲಾ ದಾಖಲಾತಿ ಆಂದೋಲನ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಮನೆಮನೆಗೂ ಭೇಟಿ ನೀಡಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಖಾಲಿ ಹುದ್ದೆಗಳ ಸವಾಲು: ಜಿಲ್ಲೆಯಲ್ಲಿ 2,055 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಮಂಜೂರಾತಿ ಹುದ್ದೆಗಳಿಗೆ ಅನುಗುಣವಾಗಿ ಶಿಕ್ಷಕರಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಶೇ 23.01ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇದ್ದರೆ, ಪ್ರೌಢಶಾಲೆಗಳಲ್ಲಿ ಶೇ 18.43ರಷ್ಟು ಹುದ್ದೆಗಳು ಖಾಲಿ ಇವೆ. ಮೊದಲು ಖಾಲಿ ಹುದ್ದೆಗಳ ಭರ್ತಿ ಇಲ್ಲವೇ ಜೂನ್‌ ಮೊದಲ ವಾರವೇ ಅತಿಥಿ ಶಿಕ್ಷಕರ ನೇಮಕಾತಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಮಕ್ಕಳ ಪಾಲಕರ ಆಗ್ರಹವಾಗಿದೆ.

ಸಕ್ರೆಪ್ಪಗೌಡ ಬಿರಾದಾರ
ರವಿ ಧೂಳಗಂಡಿ
ವಿಜಯಕುಮಾರ ಜಮಖಂಡಿ

Quote - ಶಾಲಾ ಪ್ರಾರಂಭೋತ್ಸವಕ್ಕೆ ಇಲಾಖೆಯ ಮಾರ್ಗಸೂಚಿ ಅನ್ವಯ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲೆಯ ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶಿಕ್ಷಕರು ಶುಕ್ರವಾರ ಮಕ್ಕಳನ್ನು ಖುಷಿಯಿಂದ ಸ್ವಾಗತಿಸಲಿದ್ದಾರೆ ಸಕ್ರೆಪ್ಪಗೌಡ ಬಿರಾದಾರ ಡಿಡಿಪಿಐ ಕಲಬುರಗಿ

Quote - ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ಮತ್ತು 3ನೇ ತರಗತಿಯಲ್ಲಿ ಮಕ್ಕಳು ಓದುತ್ತಿದ್ದಾರೆ. ಮಳೆಗಾಲ ಆರಂಭವಾಗುವುದರಿಂದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೂ ಆದ್ಯತೆ ನೀಡಬೇಕು. ರವಿ ಧೂಳಗಂಡಿ ಮಂಗಲಗಿ ಗ್ರಾಮಸ್ಥ

Quote - ತರಗತಿ ಕೋಣೆ ಬಿಸಿಯೂಟದ ಕೋಣೆಗಳ ಸ್ವಚ್ಛತೆ ಹಾಗೂ ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ. ಶಾಲೆಗಳಲ್ಲಿ ಅವಶ್ಯವಿದ್ದ ಸಣ್ಣಪುಟ್ಟ ದುರಸ್ತಿಗೂ ತಿಳಿಸಲಾಗಿದೆ. ವಿಜಯಕುಮಾರ ಜಮಖಂಡಿ ಬಿಇಒ ಕಲಬುರಗಿ ದಕ್ಷಿಣ

Cut-off box - ಜಿಲ್ಲೆಯ ಶಾಲೆಗಳ ವಿವರ ಸರ್ಕಾರಿ ಶಾಲೆಗಳ ಸಂಖ್ಯೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ;766 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ;991 ಸರ್ಕಾರಿ ಪ್ರೌಢ ಶಾಲೆ;298 ಅನುದಾನಿತ ಶಾಲೆಗಳ ಸಂಖ್ಯೆ ಕಿರಿಯ ಪ್ರಾಥಮಿಕ ಶಾಲೆ;13 ಹಿರಿಯ ಪ್ರಾಥಮಿಕ ಶಾಲೆ;194 ಪ್ರೌಢ ಶಾಲೆ;121 ಅನುದಾನ ರಹಿತ ಶಾಲೆಗಳ ಸಂಖ್ಯೆ ಕಿರಿಯ ಪ್ರಾಥಮಿಕ ಶಾಲೆ;207 ಹಿರಿಯ ಪ್ರಾಥಮಿಕ ಶಾಲೆ;703 ಪ್ರೌಢ ಶಾಲೆ;422 ಇತರೆ ಶಾಲೆಗಳ ಸಂಖ್ಯೆ ಕಿರಿಯ ಪ್ರಾಥಮಿಕ ಶಾಲೆ;6 ಹಿರಿಯ ಪ್ರಾಥಮಿಕ ಶಾಲೆ;82 ಪ್ರೌಢ ಶಾಲೆ;82

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.