ADVERTISEMENT

ತ್ಯಾಜ್ಯದ ರಾಶಿ ರೋಗದ ಭೀತಿ: ಮಳೆಯಿಂದ ನೆನೆದು ಕಸದ ರಾಶಿಯಿಂದ ದುರ್ವಾಸನೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:10 IST
Last Updated 28 ಮೇ 2025, 14:10 IST
ಯಡ್ರಾಮಿ ತಾಲ್ಲೂಕಿನ ಬಳಬಟ್ಟಿ ಮುಖ್ಯರಸ್ತೆ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು
ಯಡ್ರಾಮಿ ತಾಲ್ಲೂಕಿನ ಬಳಬಟ್ಟಿ ಮುಖ್ಯರಸ್ತೆ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು   

ಯಡ್ರಾಮಿ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಭಾಗದಲ್ಲಿ ಕಸದ ರಾಶಿ ತುಂಬಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದೆ.

ಪಟ್ಟಣದ ಬಸ್‌ ನಿಲ್ದಾಣ, ಮಾರುಕಟ್ಟೆ, ಜೇವರ್ಗಿ ರಸ್ತೆ, ಹಳೆ ಬಸ್ ನಿಲ್ದಾಣ, ಪಿಯು ಕಾಲೇಜು ಹಿಂಭಾಗ, ಪಬ್ಲಿಕ್ ಶಾಲೆ ಮುಂಭಾಗ, ಎಪಿಎಂಸಿ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಕಸದ ರಾಶಿ ತುಂಬಿದ್ದು, ದುರ್ನಾತ ಬೀರುತ್ತಿದೆ.

ತಹಶೀಲ್ದಾರ್ ಕಚೇರಿ ಹಿಂಭಾಗ ಮತ್ತು ಒಳಗೆ ಕಸ ತುಂಬಿದೆ. ಕೊಳೆತ ತ್ಯಾಜ್ಯದ ದುರ್ನಾತದಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಣಸಿರಸಿಗಿ ರಸ್ತೆ ಬದಿಯಲ್ಲಿ ರಸ್ತೆಯುದ್ದಕ್ಕೂ ಕಸದ ರಾಶಿ ಬಿದ್ದಿದೆ.

ADVERTISEMENT

ಮಾರುಕಟ್ಟೆ ಸಮೀಪದ ರಸ್ತೆಯಲ್ಲಿ ರಾಶಿಗಟ್ಟಲೇ ತ್ಯಾಜ್ಯ ಹಾಕಲಾಗಿದೆ. ರಸ್ತೆಗಳಲ್ಲಿ ಕಸದ ತ್ಯಾಜ್ಯ ಹಾಕಲಾಗಿದ್ದು, ಸೂಕ್ತ ರೀತಿಯಲ್ಲಿ ವಿಲೇವಾರಿಯಾಗುತ್ತಿಲ್ಲ. ಈಗಾಗಲೇ ಮಳೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ‘ಮಳೆಯ ಸಂದರ್ಭ ಕೊಳೆತ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಶೀಘ್ರದಲ್ಲಿ ಕಸ ವಿಲೇವಾರಿ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈಗಾಗಲೇ ಪಟ್ಟಣ ಪಂಚಾಯಿತಿ ಕಡಕೋಳ ರಸ್ತೆಗೆ ಹತ್ತು ಎಕರೆ ಜಮೀನು ಖರೀದಿಸಿದ್ದು ಇನ್ನೂ ಕಾಂಪೌಂಡ್ ನಿರ್ಮಾಣ ನಡೆಯುತ್ತಿದೆ. ಸದ್ಯ ಅದರಲ್ಲಿಯೇ ಕಸ ಹಾಕಲಾಗುತ್ತಿದೆ. ಕಸ ಸಂಗ್ರಹಿಸುವವರು ತಡವಾಗಿ ಬರುವುದರಿಂದ ಕಸವನ್ನು ಮನೆಯಲ್ಲೇ ಇಟ್ಟು ಕೆಲಸಕ್ಕೆ ತೆರಳುತ್ತಾರೆ. ಸಂಜೆ ಅದೇ ಕಸವನ್ನು ರಸ್ತೆ ಬದಿಗೆ ಹಾಕುತ್ತಿದ್ದು, ಇದರಿಂದಾಗಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಸಂಜು.

ಕಸ ಸಂಗ್ರಹಿಸುತ್ತಿಲ್ಲ:

ಇನ್ನು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಮನೆ ಮನೆಗೆ ತೆರಳಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸ ಸಂಗ್ರಹಿಸಬೇಕಿತ್ತು. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಸೂಕ್ತ ರೀತಿಯಲ್ಲಿ ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಕಸವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ ಎಂದು ಯಲಗೋಡ, ಆಲೂರ ಗ್ರಾಮಸ್ಥರು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.