ಕಲಬುರಗಿ: ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯ ಆದೇಶವಾದರೂ ದಂಡದ ಹಣ ಕಟ್ಟಲು ಸಾಧ್ಯವಾಗದೇ ಜೈಲಿನಲ್ಲೇ ಉಳಿದಿದ್ದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಜಂತಾಪುರ ಗ್ರಾಮದ ದುರ್ಗಪ್ಪ (65) ಎಂಬ ಕೈದಿಯ ನೆರವಿಗೆ ಜೈಲಿನ ಅಧಿಕಾರಿ ಆರ್. ಅನಿತಾ ಅವರು ಬಂದಿದ್ದರಿಂದ ಬಿಡುಗಡೆಯಾಗಿ ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ.
ದುರ್ಗಪ್ಪ 2012ರಲ್ಲಿ ಎಸಗಿದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ.
ಜೊತೆಗೆ ₹ 1.10 ಲಕ್ಷವನ್ನು ದಂಡವಾಗಿ ಪಾವತಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ದಂಡದ ಹಣ ಕಟ್ಟದಿದ್ದರೆ ಒಂದು ವರ್ಷ ಆರು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿತ್ತು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ದುರ್ಗಪ್ಪನಿಗೆ 2024ರಲ್ಲಿ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೆ ಆದೇಶವಾಗುತ್ತದೆ. ಬಿಡುಗಡೆಯಾದ ದುರ್ಗಪ್ಪನಿಗೆ ಹತ್ತಿರ ಸಂಬಂಧಿಗಳು ಇಲ್ಲ. ದೂರದ ಸಂಬಂಧಿಕರು ಇದ್ದರೂ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಪರಿಹಾರದ ಹಣ ನೀಡಲು ಮುಂದಾಗುವುದಿಲ್ಲ. ಕಾರಾಗೃಹದಲ್ಲಿ ಅಡುಗೆ ಮಾಡುತ್ತಿದ್ದ ದುರ್ಗಪ್ಪನ ಬ್ಯಾಂಕ್ ಖಾತೆಯಲ್ಲಿ ಜೈಲಿನಲ್ಲಿ ಕೆಲಸ ಮಾಡಿದ ಕೂಲಿ ಮೊತ್ತ ಹಾಗೂ ಉಳಿತಾಯದ ಹಣ ₹ 2.80 ಲಕ್ಷದಷ್ಟಿರುವುದನ್ನು ಆರ್. ಅನಿತಾ ಅವರು ಗಮನಿಸಿದರು. ಆದರೆ, ದೂರದ ಊರಿನಲ್ಲಿರುವ ಬ್ಯಾಂಕ್ ಖಾತೆಯಲ್ಲಿದ್ದುದರಿಂದ ಅದನ್ನು ಡ್ರಾ ಮಾಡುವುದು ಸುಲಭವಾಗಿರಲಿಲ್ಲ.
ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ ಅನಿತಾ ಅವರು ದುರ್ಗಪ್ಪನೊಂದಿಗೆ ತಮ್ಮ ಸಿಬ್ಬಂದಿಯನ್ನು ಕಳಿಸಿ ಹಣವನ್ನು ಡ್ರಾ ಮಾಡಿಸಿ ₹ 1.10 ಲಕ್ಷ ದಂಡದ ಹಣವನ್ನು ಬ್ಯಾಂಕ್ ಮೂಲಕ ಪಾವತಿಸಿದ ಬಳಿಕ ಬಿಡುಗಡೆಯ ಆದೇಶ ಹೊರಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.