ADVERTISEMENT

ಮನುಷ್ಯನ ಮನಸ್ಸಿನೊಂದಿಗೆ ನಾಟಕದ ಮಾತು: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:21 IST
Last Updated 3 ಡಿಸೆಂಬರ್ 2025, 5:21 IST
ಕಲಬುರಗಿಯ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ನಾಟಕ ಮತ್ತು ರಂಗಭೂಮಿಯಲ್ಲಿ ಪುರಾಣ, ಇತಿಹಾಸ ಮತ್ತು ಸಂಪ್ರದಾಯದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು 
ಕಲಬುರಗಿಯ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ನಾಟಕ ಮತ್ತು ರಂಗಭೂಮಿಯಲ್ಲಿ ಪುರಾಣ, ಇತಿಹಾಸ ಮತ್ತು ಸಂಪ್ರದಾಯದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು    

ಕಲಬುರಗಿ: ‘ನಾಟಕವು ಶ್ರೀಮಂತ ಇತಿಹಾಸ ಹೊಂದಿದ್ದು, ಅದು ತನ್ನ ಭಾಷೆಯ ಮೂಲಕ ಮನುಷ್ಯನ ಮನಸ್ಸಿನೊಂದಿಗೆ ಮಾತನಾಡುತ್ತದೆ’ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು. 

ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ನಾಟಕ ಮತ್ತು ರಂಗಭೂಮಿಯಲ್ಲಿ ಪುರಾಣ, ಇತಿಹಾಸ ಮತ್ತು ಸಂಪ್ರದಾಯ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನೇಪಾಳದ ಕಠ್ಮಂಡು ವಿಶ್ವವಿದ್ಯಾಲಯದ ಪ್ರೊ. ಖಗೇಂದ್ರ ಆಚಾರ್ಯ ಮಾತನಾಡಿ, ‘ನೇಪಾಳ ಮತ್ತು ಕರ್ನಾಟಕದ ಸಂಸ್ಕೃತಿಗಳ ನಡುವೆ ದೊಡ್ಡ ಸಂಬಂಧವಿದೆ. ಸಂಪ್ರದಾಯ ಮತ್ತು ಇತಿಹಾಸ ರಂಗಭೂಮಿಯ ಭಾಗವಾಗಿದೆ. ನಾಟಕ ಪುರಾತನ ನಿರೂಪಣೆಗಳನ್ನು ಪ್ರಶ್ನಿಸುತ್ತದೆ ಮತ್ತು ನಮ್ಮ ಆಚರಣೆಗಳನ್ನು ಪುನರ್‌ ವಿಮರ್ಶಿಸುತ್ತದೆ. ನಾಟಕವು ಮಹಾನ್ ರಾಜವಂಶಗಳನ್ನು ಭೇಟಿ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ’ ಎಂದರು.

ADVERTISEMENT

ಕಾಶ್ಮೀರದ ಶ್ರೀನಗರ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ರವೀಂದರ್ ನಾಥ್, ‘ನಾಟಕವು ಜೀವನದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಏಕೆಂದರೆ ಅದು ಮಾನವ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿದೆ’ ಎಂದು ಹೇಳಿದರು. 

ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ (ಇಎಫ್‌ಎಲ್‌ಯು) ಕುಲಪತಿ ಪ್ರೊ.ಎನ್. ನಾಗರಾಜು, ‘ನವೋದಯ ಕಾಲದಿಂದಲೂ ಪುರಾಣವು ಸಾಹಿತ್ಯ ಮತ್ತು ಸಮಾಜದಲ್ಲಿ ಬೆಸೆದಿದೆ. ಯುದ್ಧಾನಂತರದ ಅವಧಿಯಲ್ಲಿ ಪುರಾಣ ನಮಗೆ ಜ್ಞಾನೋದಯ ನೀಡಿದೆ’ ಎಂದರು.

ಕುಲಸಚಿ ಪ್ರೊ. ಆರ್. ಆರ್. ಬಿರಾದಾರ ಮಾತನಾಡಿ, ‘ನಾಟಕ ಜೀವನದ ಕನ್ನಡಿ. ಪುರಾಣ, ಇತಿಹಾಸ ಮತ್ತು ರಂಗಭೂಮಿ ಜೀವನದ ಆತ್ಮ, ದೇಹ ಮತ್ತು ಉಸಿರು ಇದ್ದಂತೆ. ಅದರ ಮೂಲಕ ನಾವು ಅಹಂಕಾರ, ಭ್ರಷ್ಟಾಚಾರ, ಹೃದಯಹೀನತೆ ಇತ್ಯಾದಿಗಳನ್ನು ನಿರ್ಮೂಲನೆ ಮಾಡಲು ಜೀವನದ ಪಾಠ ಕಲಿಯುತ್ತೇವೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಬಸವರಾಜ ಡೋಣೂರ, ‘ನಾಟಕ ನಮ್ಮ ಜೀವನಕ್ಕೆ ಹತ್ತಿರವಾಗಿದ್ದು ವಾಸ್ತವ ಮತ್ತು ಸತ್ಯದ ತಿಳಿವಳಿಕೆ ಮೂಡಿಸುತ್ತದೆ’ ಎಂದರು.  

ಸಂಘಟನಾ ಕಾರ್ಯದರ್ಶಿ ಮಹೇಂದ್ರ ಎಂ., ಪ್ರೊ.ವಿಕ್ರಮ್ ವಿಸಾಜಿ, ರೇಣುಕಾ ನಾಯಕ್, ಪ್ರೊ. ಹೆಗಡಿ, ರಾಜಣ್ಣ, ಜಯದೇವಿ ಜೆಂಗಮಶೆಟ್ಟಿ, ಪ್ರಕಾಶ ಬಾಳಿಕಾಯಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‍ಗಳು, ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.