ADVERTISEMENT

ಕಲಬುರಗಿ: ಜಿಲ್ಲೆಯಲ್ಲಿ ನಿಲ್ಲದ ಕಳ್ಳರ ಕೈಚಳಕ!

6 ತಿಂಗಳಲ್ಲಿ 131 ಬೈಕ್‌ ಕಳವು; 237 ಕಳ್ಳತನ ಪ್ರಕರಣಗಳು ದಾಖಲು

ಮಲ್ಲಿಕಾರ್ಜುನ ನಾಲವಾರ
Published 24 ಸೆಪ್ಟೆಂಬರ್ 2024, 5:34 IST
Last Updated 24 ಸೆಪ್ಟೆಂಬರ್ 2024, 5:34 IST
ಅಫಜಲಪುರ ಪಟ್ಟಣದಲ್ಲಿ ಕಳ್ಳರು ಮನೆ ಬಾಗಿಲು ಮುರಿದಿರುವುದು (ಸಂಗ್ರಹ ಚಿತ್ರ)
ಅಫಜಲಪುರ ಪಟ್ಟಣದಲ್ಲಿ ಕಳ್ಳರು ಮನೆ ಬಾಗಿಲು ಮುರಿದಿರುವುದು (ಸಂಗ್ರಹ ಚಿತ್ರ)   

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳತನ ಪ್ರಕರಣಗಳಿಂದಾಗಿ ಜನರು ನಿದ್ರೆಗೆಡುವಂತಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ಬೈಕ್ ಕಳವು, ಮನೆಯ ಮುಂದೆ ನಿಲ್ಲಿಸಿದ ಸರಕು ವಾಹನ ಕಳವು, ಕೃಷಿ ಪಂಪ್‌ಸೆಟ್ ಕಳ್ಳತನ, ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಮತ್ತು ಪುರುಷರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು, ಜೇಬುಗಳವು, ಮನೆಯ ಬೀಗ ಮುರಿದು ಒಡವೆಗಳ ಕಳವು, ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿ ಪರಾರಿ...

ಹೀಗೆ ವಿವಿಧ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ನಿತ್ಯ ಒಂದಲ್ಲಾ ಒಂದು ರೀತಿಯ ಕಳ್ಳತನ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ. ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ADVERTISEMENT

ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, 2024ರ ಮಾರ್ಚ್‌ನಿಂದ ಆಗಸ್ಟ್ ತಿಂಗಳ ನಡುವೆ ಗ್ರಾಮೀಣ ಭಾಗದಲ್ಲಿ 30 ಹಾಗೂ ನಗರ ವ್ಯಾಪ್ತಿಯ 101 ಸೇರಿ ಒಟ್ಟು 131 ಬೈಕ್‌ಗಳು ಕಳವಾಗಿವೆ. ಇದರಲ್ಲಿ ರೈತರ, ಸರ್ಕಾರಿ ನೌಕರರ, ಖಾಸಗಿ ಕಂಪನಿಗಳ ಉದ್ಯೋಗಿಗಳ, ವ್ಯಾಪಾರಿಗಳ ಬೈಕ್‌ಗಳು ಸೇರಿವೆ. ‍ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಸೇರಿದ ಬೈಕ್‌ಗಳೂ ಕಳ್ಳತನವಾಗಿವೆ.

ಈಚೆಗೆ ಸಬ್‌ಅರ್ಬನ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ₹ 9 ಲಕ್ಷ ಮೌಲ್ಯದ 12 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು. ನಿಂಬರ್ಗಾ ಠಾಣೆಯ ಪೊಲೀಸರು ಸಹ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ₹ 14 ಲಕ್ಷ ಮೌಲ್ಯದ ಕೃಷಿ ಸಲಕರಣೆ, ಟ್ರ್ಯಾಕ್ಟರ್ ಮತ್ತು ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಆದರೆ, ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಕಳ್ಳತನ ಪ್ರಕರಣಗಳು ಸಾಕಷ್ಟಿವೆ. ಆರೋಪಿಗಳ ಪತ್ತೆ ಹಾಗೂ ಸ್ವತ್ತುಗಳ ಜಪ್ತಿ ವಿಳಂಬ ಆಗುತ್ತಿದೆ ಎನ್ನುತ್ತಾರೆ ದೂರುದಾರರು.

ಕಳ್ಳತನಕ್ಕೆ ಸಂಬಂಧಿಸಿದಂತೆ 6 ತಿಂಗಳ ಅವಧಿಯಲ್ಲಿ 390 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 237 ಕಳ್ಳತನ ಪ್ರಕರಣಗಳು ಗ್ರಾಮೀಣ ಭಾಗಕ್ಕೆ ಸೇರಿದ್ದರೆ, 153 ಪ್ರಕರಣಗಳು ಕಮಿಷನರೇಟ್ ವ್ಯಾಪ್ತಿಗೆ ಸಂಬಂಧಿಸಿವೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 73, 82 ಮತ್ತು 75 ಪ್ರಕರಣಗಳು ದಾಖಲಾಗಿವೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 55ರ ಆಸುಪಾಸಿನಲ್ಲಿ ಕೇಸ್‌ಗಳು ವರದಿಯಾಗಿವೆ.

ಇದೇ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ 21 ದರೋಡೆ, ಐದು ಚಿನ್ನದ ಸರ ದೋಚಿದ ಪ್ರಕರಣಗಳು ವರದಿಯಾಗಿವೆ. ಗ್ರಾಮೀಣ ಭಾಗದಲ್ಲಿ 9 ದರೋಡೆ ಹಾಗೂ ಒಂದು ಮಾತ್ರ ಚಿನ್ನಾಭರಣ ದೋಚಿದ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣಗಳು
ಬೈಕ್ ಕಳ್ಳತನ ಪ್ರಕರಣಗಳು
‘ರಾತ್ರಿ ಗಸ್ತು ಹೆಚ್ಚಳ’
‘ಕಳ್ಳತನ ಪ್ರಕರಣಗಳ ತಡೆಗೆ ಈಗಾಗಲೇ ರಾತ್ರಿ ವೇಳೆಯ ಗಸ್ತು ಹೆಚ್ಚಳ ಮಾಡಿ ಜನರಲ್ಲಿ ಜಾಗೃತಿಯೂ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರತಿ ತಿಂಗಳು ಸಭೆ ನಡೆಸಿ ಕಳ್ಳತನ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಕೃತ್ಯ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಸಾರ್ವಜನಿಕರಿಗೆ ಯಾರಾದರು ಅನುಮಾನಾಸ್ಪದವಾಗಿ ಓಡಾಡುವುದು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.
ಬೈಕ್ ಕಳ್ಳತನ ಪ್ರಕರಣಗಳು
ತಿಂಗಳು;ಗ್ರಾಮೀಣ;ಕಮಿಷನರೇಟ್;ಒಟ್ಟು ಆಗಸ್ಟ್;3;14;17 ಜುಲೈ;5;24;29 ಜೂನ್;5;20;25 ಮೇ;4;15;19 ಏಪ್ರಿಲ್;7;15;22 ಮಾರ್ಚ್;6;13;19 ಒಟ್ಟು;30;101;131
ದಾಖಲಾದ ಕಳ್ಳತನ ಪ್ರಕರಣಗಳು
ತಿಂಗಳು;ಗ್ರಾಮೀಣ;ಕಮಿಷನರೇಟ್;ಒಟ್ಟು ಆಗಸ್ಟ್;33;15;48 ಜುಲೈ;23;35;58 ಜೂನ್;27;27;54 ಮೇ;50;25;75 ಏಪ್ರಿಲ್;48;34;82 ಮಾರ್ಚ್‌;56;17;73 ಒಟ್ಟು;237;153;390 ಆಧಾರ: ಪೊಲೀಸ್ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.