ADVERTISEMENT

₹ 1.40 ಕೋಟಿ ನಗದು, ಚಿನ್ನಾಭರಣ ದೋಚಿದ ಕಳ್ಳರು

ಕಲಬುರ್ಗಿಯ ಗುಬ್ಬಿ ಕಾಲೊನಿಯಲ್ಲಿ ಸರಣಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 15:07 IST
Last Updated 9 ಜನವರಿ 2020, 15:07 IST

ಕಲಬುರ್ಗಿ: ನಗರದ ಗುಬ್ಬಿ ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಮಾರುತಿ ಗೋಖಲೆ ಅವರ ಮನೆಯ ಕಿಟಕಿ ಮುರಿದ ಕಳ್ಳರು ₹ 1.40 ಕೋಟಿ ಮೌಲ್ಯದ ಚಿನ್ನಾಭರಣ,ನಗದು ದೋಚಿ ಪರಾರಿಯಾಗಿದ್ದಾರೆ.

ಗೋಖಲೆ ಅವರ ಎದುರಿಗೆ ವಾಸವಾಗಿರುವ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ ಎಂಬುವವರ ಮನೆಯಲ್ಲಿ ₹ 10 ಲಕ್ಷ ನಗದು, ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ. ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ.

ಮನೆಯ ಹಿಂಬದಿಯಿಂದ ಕಟಕಿಗಳನ್ನು ತೆಗೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಕಿಟಕಿಯ ಸ್ಕ್ರೂಗಳನ್ನು ತೆಗೆದ ಕಳ್ಳರು, ಮನೆಯೊಳಗೆ ನುಗ್ಗಿದ್ದಾರೆ. ಮನೆಯಲ್ಲಿ ಸಿಕ್ಕ ನಗದು, ಚಿನ್ನ, ಬೆಳ್ಳಿ ಆಭರಣಗಳನ್ನು ಗಂಟು ಕಟ್ಟಿಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಮಾರುತಿ ಗೋಖಲೆ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಇದ್ದರು. ಆದರೆ, ಅವರುಹೊರ ಹೋದ ಸಂದರ್ಭವನ್ನು ನೋಡಿ ಹಿಂಬದಿಯಿಂದ ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಇರುವ ಮಾಹಿತಿ ಗೊತ್ತಿದ್ದವರೇ ಕಳ್ಳತನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹಿಂಬದಿಯಿಂದ ಒಳ ನುಗ್ಗಿರುವ ಕಳ್ಳರು, ಮನೆ ಮುಂದಿನ ಸಿ.ಸಿ. ಟಿ.ವಿ. ಕ್ಯಾಮರಾಕ್ಕೆ ಸಾಕ್ಸ್ ಹಾಕಿದ್ದರು ಎಂದು ಗೊತ್ತಾಗಿದೆ.

‘ಮಕ್ಕಳನ್ನು ನೋಡಲು ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ಊರಿಗೆ ವಾಪಸ್ ಮರಳೋಣ ಎನ್ನುವಷ್ಟರಲ್ಲಿಯೇ ಮನೆಯಲ್ಲಿ ಕಳ್ಳತನವಾಗಿರುವ ಸುದ್ದಿ ಬಂದಿತು. ಬಂದು ನೋಡಿದಾಗ, ನಗದು, ಆಭರಣ, ಬೆಳ್ಳಿಯ ದೇವರ ಮೂರ್ತಿ ಎಲ್ಲವನ್ನು ದೋಚಿಕೊಂಡು ಹೋಗಿದ್ದಾರೆ’ ಎಂದು ರೇವಣಸಿದ್ದಪ್ಪ ಹರಸೂರ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಮಟ್ಟದ ಕಳ್ಳತನದ ಪ್ರಕರಣ ಇದಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ತನಿಖಾ ತಂಡವನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.