ADVERTISEMENT

ಜೇವರ್ಗಿ: ಪಟ್ಟಣದಲ್ಲಿಯೂ ಬಯಲೇ ಶೌಚಾಲಯ!

ಜೇವರ್ಗಿಯ ಬುದ್ಧನಗರ, ಜಗಜೀವನ್‌ರಾಂ ಬಡಾವಣೆಯಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 5:44 IST
Last Updated 17 ಜೂನ್ 2025, 5:44 IST
ಜೇವರ್ಗಿಯ ಬುದ್ಧನಗರದಲ್ಲಿ ಹಾಳು ಬಿದ್ದಿರುವ ಶೌಚಾಲಯಗಳು 
ಜೇವರ್ಗಿಯ ಬುದ್ಧನಗರದಲ್ಲಿ ಹಾಳು ಬಿದ್ದಿರುವ ಶೌಚಾಲಯಗಳು    

ಜೇವರ್ಗಿ: ಸರ್ಕಾರ ನಗರಾಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಗೆ ತಂದಿದ್ದರೂ, ಅವುಗಳು ಸಮರ್ಪಕವಾಗಿ ಜಾರಿಯಾಗದೇ ನಗರ ಪ್ರದೇಶದಲ್ಲಿಯೂ ಜನತೆ ಇನ್ನೂ ಬಯಲು ಪ್ರದೇಶದಲ್ಲಿ ತಮ್ಮ ನಿತ್ಯಕರ್ಮ ಪೂರೈಸಿಕೊಳ್ಳುವಂತಹ ಪರಿಸ್ಥಿತಿ ಇದೆ.

ಪಟ್ಟಣದ ವಾರ್ಡ್ ನಂ.5ರ ಬುದ್ಧನಗರ ಹಾಗೂ ಬಾಬು ಜಗಜೀವನ್‌ರಾಂ ಬಡಾವಣೆಯಲ್ಲಿ 1500ಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿ ದಲಿತರು ಹಾಗೂ ಬಡ ಕೂಲಿಕಾರ್ಮಿಕ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಪುರುಷರು ದುಡ್ಡು ಕೊಟ್ಟು ಬಸ್‌ಸ್ಟ್ಯಾಂಡ್‌ನತ್ತಲೋ, ರಸ್ತೆಬದಿಯ ಶೌಚಾಲಯದತ್ತಲೋ ಹೋಗಿ ನಿತ್ಯ ಕರ್ಮ ಮುಗಿಸುತ್ತಾರೆ. ಮಕ್ಕಳು ಇರುಳಿರಲಿ, ಹಗಲಿರಲಿ ರಸ್ತೆ ಬದಿಯಲ್ಲೇ ಮಲಮೂತ್ರಕ್ಕೆ ಹೋಗುತ್ತಾರೆ. ಆದರೆ ಈ ಬಡಾವಣೆಯ ಮಹಿಳೆಯರು ರಾತ್ರಿ ಮಾತ್ರ ಶೌಚಕ್ಕೆ  ಹೋಗಬೇಕು. ಕಾರಣ ಬಡಾವಣೆಯಲ್ಲಿ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಬಯಲು ಪ್ರದೇಶವನ್ನೇ ಆಶ್ರಯಿಸಿದ್ದಾರೆ. 

ಬಡಾವಣೆ ಪಕ್ಕದಲ್ಲಿರುವ ತೋಂಟದಾರ್ಯ ವಿದ್ಯಾಪೀಠದ ಎದುರುಗಡೆಯ ರಸ್ತೆ ಹಾಗೂ ಪಿಕಾರ್ಡ್ ಬ್ಯಾಂಕ್ ಪಕ್ಕದ ರಸ್ತೆಗಳೇ ಈ ಬಡಾವಣೆಯ ಮಹಿಳೆಯರ ಶೌಚ ಪ್ರದೇಶ.

ADVERTISEMENT

2017-18 ರಲ್ಲಿ ಪುರಸಭೆ ವತಿಯಿಂದ ಎರಡು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಿರ್ವಹಣೆ ಕೊರತೆಯಿಂದ ಈ ಎರಡೂ ಕಟ್ಟಡಗಳು ಸಂಪೂರ್ಣವಾಗಿ ಹಾಳು ಬಿದ್ದಿವೆ. ನೀರಿನ ವ್ಯವಸ್ಥೆ ಇಲ್ಲದೇ ಗಬ್ಬೆದ್ದು ನಾರುತ್ತಿವೆ. ಕಟ್ಟಡದ ಸುತ್ತಲೂ ಜಾಲಿ ಕಂಟಿ ಬೆಳೆದು ಒಳಹೋಗಲು ದಾರಿಯಿಲ್ಲವಾಗಿದೆ. ಪ್ರತಿ ಮಂಗಳವಾರ ಸಂತೆಗೆ ಬರುವ ಜನ ಈ ಹಾಳು ಬಿದ್ದ ಕಟ್ಟಡದಲ್ಲಿ ಮಲಮೂತ್ರ‌ ಮಾಡುತ್ತಿರುವುದರಿಂದ ಇಡೀ ವಾತಾವರಣ ಗಬ್ಬೆದ್ದು ಹೋಗಿದೆ.

ಬುದ್ದ ನಗರ ಹಾಗೂ ಬಾಬು ಜಗಜೀವನರಾಂ ಬಡಾವಣೆಗಳು ಪಟ್ಟಣದಲ್ಲಿಯೇ ಅತ್ಯಂತ ತೀರಾ ಹಿಂದುಳಿದ ವಾರ್ಡ್ ಆಗಿವೆ. ಪುರಸಭೆ ವತಿಯಿಂದ ಇಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಆಗಿಲ್ಲ.  ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹತ್ತಾರು ಬಾರಿ ಇಲ್ಲಿನ ಮಹಿಳೆಯರು, ಮಕ್ಕಳು, ಯುವಕರು ಸಮಸ್ಯೆ ಹೊತ್ತು ಪುರಸಭೆಗೆ ಹೋದರೆ ಬರೀ ಭರವಸೆ ಮೂಲಕವೇ ಉತ್ತರ ಲಭಿಸಿದೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಬೇಸರಿಸುತ್ತಾರೆ.

ಬಡಾವಣೆಗೆ ಭೇಟಿ‌ ನೀಡಿದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಸ್ಥಳೀಯರ ಸಮಸ್ಯೆ ಆಲಿಸಿದರು 
ಈ ಬಡಾವಣೆಯಲ್ಲಿರುವ ಎರಡೂ ಶೌಚಾಲಯಗಳಿಗೆ ನೀರಿನ ವ್ಯವಸ್ಥೆ ಒದಗಿಸಬೇಕು. ಇಲ್ಲದಿದ್ದರೆ ಪುರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ
ಅನೀಲ ದೊಡ್ಡಮನಿ ಸ್ಥಳೀಯ
ಬುದ್ಧನಗರಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಲಾಗಿದ್ದು ಶೌಚಾಲಯ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ
- ಮಲ್ಲಣ್ಣ ಯಲಗೋಡ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.