
ವಾಡಿ: ಅಂಗನವಾಡಿಯ ಮಾತೃವಂದನಾ ಫಲಾನುಭವಿಗಳ ಖಾತೆಯ ಮೇಲೆ ಆನ್‌ಲೈನ್ ವಂಚಕರ ಕಣ್ಣು ಬಿದ್ದಿದ್ದು, ಮೊಬೈಲ್ ಕರೆ ನಂಬಿ ಹಣ ಕಳೆದುಕೊಳ್ಳುತ್ತಿರುವವರ ಪಟ್ಟಿ ಬೆಳೆಯುತ್ತಲೆ ಇದೆ.
ಕೇಂದ್ರ ಸರ್ಕಾರದ ಮಾತೃವಂದನಾ ಫಲಾನುಭವಿಗಳ ದತ್ತಾಂಶ ಸೋರಿಕೆಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಆನ್‌ಲೈನ್ ವಂಚನೆ ನಡೆಸುವ ಕಂಪನಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿವೆ. ವಂಚಕರ ಮಾತು ನಂಬಿ ಹಣ ಕಳೆದುಕೊಂಡು ಗೋಳಾಡುವಂತಾಗಿದೆ.
ಇಂಗಳಗಿ ಗ್ರಾಮದ 8 ಜನ, ಕಮರವಾಡಿಯ 10 ಹಾಗೂ ಬಳವಡಗಿಯ 30ಕ್ಕೂ ಅಧಿಕ ಮಾತೃವಂದನಾ ಫಲಾನುಭವಿಗಳ ನಂಬರಿಗೆ ಆನ್‌ಲೈನ್ ವಂಚಕರ ಕರೆಗಳು ಬಂದಿವೆ. ವಂಚಕರು ಸೂಚಿಸಿದ ಖಾತೆಗೆ ಇಂಗಳಗಿಯ ಮಮ್ತಾಜ್ ಬೇಗಂ ₹9,999, ರಸೂಲ್ ಬೀ ₹7,000 ಬಳವಡಗಿಯ ಲಕ್ಷ್ಮೀ, ರೇಣುಕಾ, ಹಣಮಂತಿ, ಕಮರವಾಡಿಯ ಮೈನುದ್ದಿನ್ ಪಟೇಲ ಸಹಿತ ಒಟ್ಟು 20ಕ್ಕೂ ಅಧಿಕ ಜನ ಓಟಿಪಿ ಹೇಳಿ ಹಣ ವರ್ಗಾಯಿಸಿ ಮೋಸ ಹೋಗಿದ್ದಾರೆ. ಇದರಿಂದ ಮೋಸಹೋಗಿರುವವರ ಪಟ್ಟಿ ದೊಡ್ಡದಿದ್ದು, ಅದರಲ್ಲಿ ಕೆಲವು ಮಾತ್ರ ‘ಪ್ರಜಾವಾಣಿ’ಗೆ ಮಾಹಿತಿ ದೊರಕಿದೆ.
‘ಮಾತೃವಂದನ ಫಲಾನುಭವಿಗಳಿಗೆ ಈ ರೀತಿಯ ವಂಚನೆ ಬಗ್ಗೆ ತಿಳಿಸಿದ್ದೇವೆ. ಆದರೂ ಫಲಾನುಭವಿಗೆ ಸಂಬಂಧಿಸಿದ ವಿವರಗಳು ವಂಚಕರಿಗೆ ತಿಳಿದಿರುವುದರಿಂದ ಕೆಲವರು ವಂಚನೆಗೆ ಒಳಗಾಗುವ ಅಪಾಯವಿದೆ. ನಮ್ಮ ಕಾರ್ಯಕರ್ತೆಯರು ಎಲ್ಲರಿಗೂ ಮಾಹಿತಿ ತಿಳಿಸುತ್ತಿದ್ದಾರೆ ಎನ್ನುತ್ತಾರೆ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ.
ಪೋರ್ಟಲ್‌ನಲ್ಲಿರುವ ಫಲಾನುಭವಿಗಳ ವಿವರ ವಂಚಕರ ಕೈಗೆ ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕು. ಇಂತಹ ವಂಚನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಸಂಘದ ಜಿಲ್ಲಾ ಉಪಾಧ್ಯಕ್ಷೆ ಶೇಖಮ್ಮ ಕುರಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ ಆಗ್ರಹಿಸಿದ್ದಾರೆ.
ಆನ್‌ಲೈನ್ ಕರೆಗೆ ಓಗೊಟ್ಟು ಓಟಿಪಿ ಹೇಳಿದರೆ ಕ್ಷಣಮಾತ್ರದಲ್ಲಿ ಹಣ ಲಪಟಾಯಿಸುವ ದಂಧೆ ನಡೆದಿದ್ದು, ಈ ರೀತಿ ಮೋಸ ಹೋದರೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು. ಅಂತಹ ಕರೆಗಳಿಗೆ ಸ್ಪಂದಿಸಬಾರದು ಎಂದು ವಾಡಿ ಪಿಎಸ್ಐ ತಿರುಮಲೇಶ ಕೆ.ಸಾರ್ವಜನಿಕರಿಗೆ ತಿಳಿಸಿದ್ದಾರೆ.
‘ಮಾತೃವಂದನಾ ಯೋಜನೆಯಡಿ ಫಲಾನುಭವಿಗಳಿಗೆ ಮೊದಲ ಹೆರಿಗೆಗೆ ₹5 ಸಾವಿರ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣುಮಗು ಜನಿಸಿದರೆ ₹6 ಸಾವಿರ ಸಿಗುತ್ತದೆ. ಹಣ ಕಳೆದುಕೊಂಡ ಕೆಲ ಫಲಾನುಭವಿಗಳು ಅದನ್ನು ಕಾರ್ಯಕರ್ತರೇ ನೀಡಬೇಕು ಎಂದು ಒತ್ತಾಯಿಸಿದ ಉದಾಹರಣೆಗಳಿವೆ.
ಶಹಾಬಾದ ನಗರದಲ್ಲಿ ಈಚೆಗೆ ಹಣ ಕಳೆದುಕೊಂಡ ಫಲಾನುಭವಿಗಳು ಹಣ ಕೊಡುವಂತೆ ಕಾರ್ಯಕರ್ತೆಯರಿಗೆ ದುಂಬಾಲು ಬಿದ್ದು ಕಾರ್ಯಕರ್ತೆ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಜರುಗಿದೆ. ನಮ್ಮದಲ್ಲದ ತಪ್ಪಿಗೆ ನಾವು ಸಾರ್ವಜನಿಕರಿಂದ ಬೈಗುಳ ತಿನ್ನಬೇಕಿದೆ ಎಂದು ಹಲವು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಕರೆಗೆ ಸ್ಪಂದಿಸಿ ಒಟಿಪಿ ಹೇಳಿದರೆ ಕ್ಷಣಾರ್ಧದಲ್ಲಿ ನಿಮ್ಮ ಹಣ ಲಪಟಾಯಿಸುತ್ತಾರೆ. ಎಚ್ಚರಿಕೆಯಿಂದ ಗಮನಿಸಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕುತಿರುಮಲೇಶ ಕೆ.,ಪಿಎಸ್ಐ ವಾಡಿ
3 ದಿನದ ಹಿಂದೆ ಕರೆ ಮಾಡಿ ₹12 ಸಾವಿರ ಹಣ ಬರುತ್ತದೆ ಲಿಂಕ್ ಕಳಿಸುತ್ತೇವೆ ಓಪನ್ ಮಾಡಿ ಮಾಹಿತಿ ತುಂಬಿ ಕಳುಹಿಸಿ ಎಂದರು. ಅನುಮಾನ ಬಂದು ಕರೆ ಕಡಿತ ಮಾಡಿದ್ದೇನೆವಿಶಾಲ ಪಾಟೀಲ್, ಇಂಗಳಗಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.