
ಚಿತ್ತಾಪುರ: ಪಟ್ಟಣದಲ್ಲಿ ಸೋಮವಾರ ನಡೆದ ‘ಭೀಮ ನಡೆ’ ಮೆರವಣಿಗೆ ಹಾಗೂ ಸಂವಿಧಾನ ಸಮಾವೇಶ ‘ನೀಲಿ ಶಕ್ತಿ’ ಪ್ರದರ್ಶನ ಹಾಗೂ ‘ಸಂವಿಧಾನ ಶಕ್ತಿ’ ಅನಾವರಣಕ್ಕೆ ಸಾಕ್ಷಿಯಾಯಿತು.
ಸಮತಾ ಸೈನಿಕ ದಳದ ಕಾರ್ಯಕರ್ತರಿಂದ ನಡೆದ ಶಿಸ್ತಿನ ಮೆರವಣಿಗೆ ಬಳಿಕ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ‘ಸಂವಿಧಾನ ಸಮಾವೇಶ’ ಬಹಿರಂಗ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ‘ಸಂವಿಧಾನದಲ್ಲಿ ಮನುವಿನ ಆತ್ಮವಿಲ್ಲ ಎಂದು ಹೇಳುವವರು ಹೇಗೆ ದೇಶಭಕ್ತರಾಗುತ್ತಾರೆ’ ಎಂದು ಪ್ರಶ್ನಿಸಿದರು.
‘ಸಂವಿಧಾನ, ರಾಷ್ಟ್ರ ಧ್ವಜ ಗೌರವಿಸದವರು ಈ ದೇಶದ ಪ್ರಜೆಗಳಾಗಲು ಸಾಧ್ಯವಿಲ್ಲ. ಸಂವಿಧಾನ ಒಪ್ಪದವರಿಗೆ ಈ ದೇಶದಲ್ಲಿ ಕೆಲಸವೇನಿದೆ. ಬಂದ ದಾರಿಗೆ ಸುಂಕವಿಲ್ಲದಂತೆ ಬಂದಲ್ಲಿಗೆ ಹೋಗಬೇಕು’ ಎಂದು ಆರ್‌ಎಸ್‌ಎಸ್ ಹೆಸರು ಪ್ರಸ್ತಾಪಿಸದೇ ಆಕ್ರೋಶ ವ್ಯಕ್ತಪಡಿಸಿದರು.
‘ದೇಶದ ಭಾವೈಕ್ಯ, ಸಹೋದರತೆ, ಸಮಗ್ರತೆ, ಸಮಾನತೆ ಒಪ್ಪದೆ ಅಪಮಾನಿಸುವವರ ಬಗ್ಗೆ ಜನರು ಎಚ್ಚರ ವಹಿಸಬೇಕು. ಪೆನ್ನು ಕೊಡಿ ಎಂದು ಹೇಳಿದರೆ ದೊಣ್ಣೆ ಕೊಡುವುದು ಏಕೆ? ಪ್ರಜ್ಞಾವಂತರ ಕೈಯಲ್ಲಿ ದೇಶವಿರಬೇಕು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಇರುವ ಪ್ರಜಾಪ್ರಭುತ್ವವು ಇಂದು ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ ಮಾರಾಟವಾಗುತ್ತಿದೆ. ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿಗಳನ್ನೇ ಆಹ್ವಾನಿಸದೆ ಉದ್ಘಾಟಿಸಿದ್ದು ಗಮನಿಸಿದರೆ ದೇಶದಲ್ಲಿ ಅಲಿಖಿತ ಸಂವಿಧಾನ ಚಾಲ್ತಿಯಲ್ಲಿದೆ ಎಂಬುದು ದಿಟ’ ಎಂದರು.
ಅಧ್ಯಕ್ಷತೆ ವಹಿಸಿದ್ದ ವರಜ್ಯೋತಿ ಭಂತೇಜಿ ಮಾತನಾಡಿದರು. ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮಿ, ಮುಖಂಡರಾದ ಶಿವರುದ್ರ ಭೀಣಿ, ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸುನೀಲ್ ದೊಡ್ಡಮನಿ, ರಾಜು ಜಾನೆ, ನಿಂಗಣ್ಣ ಹೆಗಲೇರಿ, ಲಚ್ಚಪ್ಪ ಜಮಾದಾರ, ಶಿವಕುಮಾರ ಯಾಗಾಪುರ, ಶಾಂತಪ್ಪ ಚಾಳಿಕಾರ, ಭೀಮಸಿಂಗ್ ಚವಾಣ್, ಜಗಣ್ಣಗೌಡ ರಾಜತೀರ್ಥ, ಪ್ರಭು ಬೆಣ್ಣೂರು, ಯಲ್ಲಾಲಿಂಗ ಹಡಪದ, ರಮೇಶ ಹಡಪದ, ಮಲ್ಲಿಕಾರ್ಜುನ ಬೆಣ್ಣೂರಕರ, ನಾಗಯ್ಯ ಗುತ್ತೇದಾರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.
ದಲಿತ ಮುಖಂಡ ಮರಿಯಪ್ಪ ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಹೊಸಮನಿ ಸ್ವಾಗತಿಸಿದರು. ಬಸವರಾಜ ಚಿನ್ನಮಳ್ಳಿ ನಿರೂಪಿಸಿದರು. ಬಸವರಾಜ ಹೊಸಳ್ಳಿ ವಂದಿಸಿದರು. ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಭೀಮಣ್ಣ ಸಾಲಿ, ಶಿವಾನಂದ ಪಾಟೀಲ ಮರತೂರು, ಮುಕ್ತಾರ್ ಪಟೇಲ, ವೀರಣ್ಣಗೌಡ ಪರಸರೆಡ್ಡಿ, ನಾಗರೆಡ್ಡಿ ಗೋಪಸೇನ್, ಚಂದ್ರಶೇಖರ ಕಾಶಿ, ರಸೂಲ್ ಮುಸ್ತಫಾ, ಜಯಪ್ರಕಾಶ ಕಮಕನೂರು, ನಾಗುಗೌಡ ಅಲ್ಲೂರು, ಮಲ್ಲಿಕಾರ್ಜುನ ಕಾಳಗಿ, ಓಂಕಾರೇಶ್ವರ ರೇಶ್ಮಿ, ಶೀಲಾ ಕಾಶಿ, ನಾಗು ಕಲ್ಲಕ್, ರಾಮಲಿಂಗ ಬಾನರ, ಯಲ್ಲಾಲಿಂಗ ಮುಗುಟಾ, ಭೀಮಣ್ಣಾ ಹೋತಿನಮಡಿ, ಶರಣು ಡೋಣಗಾಂವ, ಸಂಜಯ ಬೂಳಕರ, ದೇವು ಯಾಬಾಳ, ಶರಣು ವಾರದ, ಸೂರಜ ಕಲ್ಲಕ, ವಿಜಯಕುಮಾರ ದೊಡ್ಡಮನಿ, ಮಲ್ಲಿಕಾರ್ಜುನ ಮುಡಬೂಳಕರ, ಶ್ರೀಕಾಂತ ಸಿಂಧೆ, ಡಿ.ಕೆ.ಪಾಟೀಲ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
‘ಶತಮಾನಕ್ಕೊಮ್ಮೆ ಪ್ರಜ್ಞಾವಂತರ ಜನನ’
ಬೀದರ್ ಜಿಲ್ಲೆಯ ಕೌಟಾದ ಸಿದ್ದರಾಮ ಶರಣರು ಮಾತನಾಡಿ ‘ಸಂವಿಧಾನ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿಲ್ಲ ಬಿ.ಎನ್.ರಾವ್ ರಚಿಸಿದ್ದಾರೆ ಎಂದು ಗದ್ದಲ ಎಬ್ಬಿಸಿದ್ದು ದುರಂತ. ಅದು ಸಂಪೂರ್ಣ ಸುಳ್ಳು. ದೇಶಕ್ಕೆ ಬೇಕಾಗಿದ್ದು ರಾಮ ರಾಜ್ಯವಲ್ಲ ಭೀಮರಾಜ್ಯ’ ಎಂದರು. ‘ವಿಚಾರವಂತರು ಮತ್ತು ಪ್ರಜ್ಞಾವಂತರು ಶತಮಾನಕ್ಕೊಮ್ಮೆ ಹುಟ್ಟುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಚಾರವಂತರು ಪ್ರಜ್ಞಾವಂತರಾಗಿದ್ದು ಸಮಾಜದಲ್ಲಿನ ವ್ಯವಸ್ಥೆಯ ಕುರಿತು ಪ್ರಶ್ನಿಸುತ್ತಿದ್ದಾರೆ’ ಎಂದರು.
ಎರಡು ಆದೇಶ; ಮೆರವಣಿಗೆ ವಿಳಂಬ?
ಸಂವಿಧಾನ ಸಂರಕ್ಷಣಾ ಸಮಿತಿಯವರು ‘ಭೀಮನಡೆ’ ಮೆರವಣಿಗೆ ಮತ್ತು ಸಂವಿಧಾನ ಸಮಾವೇಶ ನಡೆಸಲು ಅನುಮತಿ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಎರಡು ಆದೇಶ ಹೊರಡಿಸಿದ ಅಚ್ಚರಿ ಬೆಳವಣಿಗೆ ಸೋಮವಾರ ತಡರಾತ್ರಿ ಜರುಗಿದೆ.
‘ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲ್ಲೂಕಿನವರು ಮಾತ್ರ ಪಾಲ್ಗೊಳ್ಳಬೇಕು’ ಎಂದು ನ.30ರಂದು ಷರತ್ತು ಬದ್ದ ಅನುಮತಿ ನೀಡಿ ಆದೇಶಿಸಿದ್ದರು.
ಈ ಆದೇಶದಿಂದ ಗೊಂದಲಕ್ಕೆ ಒಳಗಾಗಿದ್ದ ಆಯೋಜಕರು ಸಾರ್ವಜನಿಕರು ‘ಸಂವಿಧಾನ ಸಮರ್ಪಣೆ ನಿಮಿತ್ತ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಷರತ್ತು ವಿಧಿಸಿದ್ದು ತಪ್ಪು’ ಎಂದು ಆಕ್ಷೇಪಿಸಿದರು.
ನಂತರ ‘ಸಮಾವೇಶಕ್ಕೆ ತಾಲ್ಲೂಕಿನ ಜನರೊಂದಿಗೆ ಸಂವಿಧಾನ ಅಭಿಮಾನವುಳ್ಳ ಬೇರೆ ಜಿಲ್ಲೆಯವರೂ ಭಾಗವಹಿಸಲು ಅನುಮತಿ ನೀಡಿ ಮತ್ತೊಂದು ಆದೇಶ ಮಾಡಿದ್ದಾರೆ. ತಹಶೀಲ್ದಾರ್ ಅವರು ಷರತ್ತು ವಿಧಿಸಿ ಹೊರಡಿಸಿದ್ದ ಆದೇಶದಿಂದ ಬೆಳಿಗ್ಗೆ 11.30ಕ್ಕೆ ನಡೆಯಬೇಕಾಗಿದ್ದ ಪಥ ಸಂಚಲನವು ಮೂರು ಗಂಟೆ ವಿಳಂಬದ ಬಳಿಕ ಮಧ್ಯಾಹ್ನ 2.40ಕ್ಕೆ ಶುರುವಾಯಿತು’ ಎನ್ನುವ ಚರ್ಚೆ ಕೇಳಿ ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.