ಕಲಬುರಗಿ: ‘ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿಯನ್ನು ಕೈಬಿಟ್ಟು ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಗರದಲ್ಲಿ ಭಾನುವಾರ ಮನವಿಪತ್ರ ಸಲ್ಲಿಸಿದರು.
‘ರಾಜ್ಯ ಸರ್ಕಾರ ದ್ವಿಭಾಷಾ ನೀತಿಯನ್ನು ಜಾರಿಗೆ ತಂದರೆ ರಾಜ್ಯದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 25 ಸಾವಿರ ಶಿಕ್ಷಕರ ಹಾಗೂ ಅವರ ಕುಟುಂಬದವರ ಗತಿ ಏನು ಎಂಬ ಚಿಂತೆ ಕಾಡುತ್ತಿದೆ. ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಹಿಂದಿ ಶಿಕ್ಷಕರಾಗಿ ಅಲ್ಪ ವೇತನದಲ್ಲಿ ಜೀವನ ನಡೆಸುತ್ತಿರುವ ಶಿಕ್ಷಕರ ಜೀವನ ಬೀದಿಗೆ ಬರುತ್ತದೆ’ ಎಂದು
ತಿಳಿಸಿದರು.
‘ತೃತೀಯ ಭಾಷಾ (ಹಿಂದಿ, ಸಂಸ್ಕೃತ, ಉರ್ದು, ಮರಾಠಿ, ತೆಲುಗು, ತಮಿಳು, ಮಲಯಾಳಂ, ತುಳು, ಕೊಂಕಣಿ ಶಿಕ್ಷಕರಾಗಬೇಕೆಂದು ಕನಸು ಕಾಣುತ್ತಾ ಬಿ.ಇಡಿ ಪದವಿ ಮಾಡಿರುವ ಅನೇಕ ಭಾವಿ ಶಿಕ್ಷಕರು ನಿರುದ್ಯೋಗಿಗಳಾಗುತ್ತಾರೆ. ಹಾಗಾಗಿ ತ್ರಿಭಾಷಾ ಸೂತ್ರವನ್ನು ಮುಂದುವರಿಸಲು ಮತ್ತು ಹಿಂದಿ ಭಾಷಾ ಶಿಕ್ಷಕರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿ ಅವರ ಜೊತೆ ಚರ್ಚಿಸಿ ನ್ಯಾಯ ದೊರಕಿಸಬೇಕು’ ಎಂದು ಕೇಳಿಕೊಂಡರು.
ಸಂಘದ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಬಿರಾದಾರ, ಕಲಬುರಗಿ ಪ್ರೌಢಶಾಲಾ ಸಹಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಶ್ ನೀಲಹಳ್ಳಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಜಮೀಲ್ ಇಮ್ರಾನ್, ಪದಾಧಿಕಾರಿಗಳಾದ ಭೀಮಸಿಂಗ್ ರಾಥೋಡ, ಸಂಜಯ ಮಾಲೆ, ದೀಪಕ, ನಿತ್ಯಾನಂದ, ಜೆ.ಎಚ್.ಪಟೇಲ್, ಮಂಜುಳಾ ಠಾಕೂರ್ ಹಾಜರಿದ್ದರು.
ಹಿಂದಿ ವಿಷಯದ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.