
ಕಲಬುರಗಿ: ಬಸ್ ಹತ್ತುವಾಗಿ ಪ್ರಯಾಣಿಕರ ಚಿನ್ನಾಭರಣ ಎಗರಿಸುತ್ತಿದ್ದ ಮೂರು ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಮೂವರು ಕಳ್ಳಿಯರನ್ನು ಬಂಧಿಸಿದ್ದಾರೆ. ಪ್ರಯಾಣಿಕರು ಕಳೆದುಕೊಂಡಿದ್ದ ಅಂದಾಜು ₹10 ಲಕ್ಷಕ್ಕೂ ಅಧಿಕ ಮೊತ್ತದ 11.5 ತೊಲ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
‘ಕಲಬುರಗಿಯ ಬಾಪುನಗರದ ಚಿಮ್ಮನ ಕಾಂಬಳೆ (52), ಶಶಿಕಲಾ ಅಲಿಯಾಸ್ ಶಕೀಲಾ ಉಪ್ಪಾರಿ (60) ಹಾಗೂ ಮಾಧುರಿ ಸಕಟ್ (40) ಬಂಧಿತರು. ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಬಸ್ ಹತ್ತುವಾಗ ಚಿನ್ನಾಭರಣ ಕಳೆದುಕೊಂಡ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಸೇಡಂನಲ್ಲಿ ದಾಖಲಾದ ಪೈಕಿ ಒಂದು ಪ್ರಕರಣದಲ್ಲಿ 6 ತೊಲ ಚಿನ್ನಾಭರಣ ಮತ್ತೊಂದು ಪ್ರಕರಣದಲ್ಲಿ 2 ತೊಲ ಚಿನ್ನಾಭರಣವನ್ನು ಆರೋಪಿಗಳು ಕದ್ದಿದ್ದರು. ಶಹಾಬಾದ್‌ನಲ್ಲಿ ದಾಖಲಾದ ಪ್ರಕರಣದಲ್ಲಿ ಮಹಿಳೆಯರಿಬ್ಬರು 3.5 ತೊಲ ಚಿನ್ನಾಭರಣ ಕಳೆದುಕೊಂಡಿದ್ದರು’ ಎಂದು ಮಾಹಿತಿ ನೀಡಿದರು.
‘ಈ ಪ್ರಕರಣಗಳ ಭೇದಿಸಲು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ನಟರಾಜ ಲಾಡೆ, ಪಿಎಸ್‌ಐ ಶಾಮರಾಯ ಹಾಗೂ ಸಿಬ್ಬಂದಿ ಇದ್ದ ಒಂದು ತಂಡ ಹಾಗೂ ಸೇಡಂ ಸಿಪಿಐ ಮಹಾದೇವ ದಿಡ್ಡಿಮನಿ ನೇತೃತ್ವದಲ್ಲಿ ಪಿಎಸ್‌ಐ ಉಪೇಂದ್ರಕುಮಾರ, ಪಿಎಸ್‌ಐ ಶರಣಪ್ಪ ಹಾಗೂ ಸಿಬ್ಬಂದಿ ಇದ್ದ ಮತ್ತೊಂದು ತಂಡ ರಚಿಸಲಾಗಿತ್ತು’ ಎಂದು ವಿವರಿಸಿದರು.
‘ಎರಡೂ ತಂಡಗಳು ಸತತವಾಗಿ ನಿಗಾವಹಿಸಿದ್ದವು. ಮತ್ತೊಂದೆಡೆ ಈ ಕಳ್ಳತನದ ಹಿಂದೆ ಕಲಬುರಗಿ ಮೂಲದವರ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಅದರಂತೆ ಮೂರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಳವು ಮಾಡಿದ್ದ ಎಲ್ಲ ಚಿನ್ನಾಭರಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಇನ್‌ಸ್ಪೆಕ್ಟರ್ ನಟರಾಜ ಲಾಡೆ, ಸೇಡಂ ಸಿಪಿಐ ಮಹಾದೇವ ಡಿಗ್ಗಿ, ಶಹಾಬಾದ್ ಪಿಎಸ್‌ಐ ಶಾಮರಾಯ, ಸೇಡಂ ಪಿಎಸ್‌ಐಗಳಾದ ಉಪೇಂದ್ರಕುಮಾರ ಹಾಗೂ ಶರಣಪ್ಪ ಇದ್ದರು.
ಇತ್ತೀಚೆಗೆ ಬಸ್‌ನಲ್ಲಿ ಚಿನ್ನಾಭರಣ ಕಳವು ಹೆಚ್ಚುತ್ತಿದೆ. ಈ ಕುರಿತು ಇಲಾಖೆಯಿಂದ ಬಸ್‌ಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಜನ ಜಾಗೃತರಾಗಿರಬೇಕುಅಡ್ಡೂರು ಶ್ರೀನಿವಾಸುಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಬಂಗಾರಕ್ಕೆ ನಿಗಾ ಬಸ್‌ನಲ್ಲಿ ಕನ್ನ’
‘ಮೂವರು ಆರೋಪಿಗಳು ಮೊದಲಿಗೆ ಬಸ್ ನಿಲ್ದಾಣದಲ್ಲಿ ಕೂರುತ್ತಿದ್ದರು. ಪ್ರಯಾಣಿಕರ ಪೈಕಿ ಯಾರ ಕೊರಳಲ್ಲಿ ಬಂಗಾರವಿದೆ ಎಂದು ಪತ್ತೆ ಮಾಡುತ್ತಿದ್ದರು. ಅವರು ಬಸ್ ಹತ್ತಬೇಕಾದರೆ ಮೂವರು ಆರೋಪಿಗಳಲ್ಲಿ ಒಬ್ಬರು ಮುಂದೆ ಬಸ್ ಹತ್ತುತ್ತಿದ್ದರು. ಹಿಂದೆ ಇಬ್ಬರು ದಟ್ಟಣೆ ಸೃಷ್ಟಿಸುತ್ತಿದ್ದರು. ಮೊದಲು ಬಸ್ ಹತ್ತಿದ ಆರೋಪಿ ಆಗಲೇ ಎದುರಿನಿಂದ ಇಳಿಯಲು ಯತ್ನಿಸಿ ಗದ್ದಲ ಸೃಷ್ಟಿಸಿ ಕಟರ್‌ನಿಂದ ಚಿನ್ನಾಭರಣ ಕತ್ತರಿಸಿಕೊಂಡು ಪರಾರಿಯಾಗುವ ಶೈಲಿ ಅನುಸರಿಸುತ್ತಿದ್ದರು. ಮೂರು ಪ್ರಕರಣಗಳಲ್ಲಿ ಹೀಗೆ ಕಳವು ಮಾಡಲಾಗಿತ್ತು. ಈ ಮೂವರು ಆರೋಪಿಗಳ ಎಂಒಪಿ ಹಾಗೂ ಫಿಂಗರ್‌ಪ್ರಿಂಟ್ ಫೈಲ್ ತೆರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿವರಿಸಿದರು.
ಇಬ್ಬರು ಮನೆಗಳ್ಳರ ಬಂಧನ
ಸೇಡಂ ಠಾಣೆ ವ್ಯಾಪ್ತಿಯ ರಂಜೋಳ ಗ್ರಾಮದಲ್ಲಿ ಮನೆಯೊಂದರ ಕೀಲಿ ಮುರಿದು ಕಳವು ಮಾಡಲಾಗಿದ್ದ ಪ್ರಕರಣವನ್ನು ಭೇದಿಸಿರುವ ಸಿಪಿಐ ಮಹಾದೇವ ದಿಡ್ಡಿಮನಿ ನೇತೃತ್ವದ ಪೊಲೀಸರ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ‘ಚಿತ್ತಾಪುರ ತಾಲ್ಲೂಕಿನ ಅಲ್ಲೂರು (ಬಿ) ಗ್ರಾಮದ ಸಿದ್ದಪ್ಪ ಸೇಬಾಳ (21) ಹಾಗೂ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೊನಿಯ ಸುರೇಶ ನರಬೋಳ (40) ಬಂಧಿತರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ‘ಮನೆಯ ಕೀಲಿ ಮುರಿದು ಸಿಸಿಟಿವಿ ಮಾನಿಟರ್ ಚಿನ್ನ–ಬೆಳ್ಳಿ ಆಭರಣಗಳು ಹಾಗೂ ₹15 ಸಾವಿರ ನಗದು ಕಳವಾಗಿತ್ತು. ಆರೋಪಿಗಳು ಚಿನ್ನಾಭರಣ ಮಾರಿ ಹಣ ಖರ್ಚು ಮಾಡಿದ್ದಾರೆ. ಸದ್ಯ ಆರೋಪಿಗಳಿಂದ ಸಿಸಿಟಿವಿ ಮಾನಿಟರ್ ಹಾಗೂ ₹5 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.