ADVERTISEMENT

ಅಫಜಲಪುರ: ತೊಗರಿಗೆ ನೆಟೆ ರೋಗ

ಶಿವಾನಂದ ಹಸರಗುಂಡಗಿ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST
ಅಫಜಲಪುರ ತಾಲ್ಲೂಕಿನ ಅಳ್ಳಗಿ(ಕೆ) ಗ್ರಾಮದ ರಮೇಶ ಪಾಟೀಲ ಎಂಬುವರ ತೊಗರಿ ಬೆಳೆಗೆ ನೆಟೆ ರೋಗ ತಗುಲಿದೆ
ಅಫಜಲಪುರ ತಾಲ್ಲೂಕಿನ ಅಳ್ಳಗಿ(ಕೆ) ಗ್ರಾಮದ ರಮೇಶ ಪಾಟೀಲ ಎಂಬುವರ ತೊಗರಿ ಬೆಳೆಗೆ ನೆಟೆ ರೋಗ ತಗುಲಿದೆ   

ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ತೊಗರಿ ಬೆಳೆ ಕುಡಿ, ಮೊಗ್ಗು ಮತ್ತು ಹೂವು ಬಿಡುವ ಹಂತದಲ್ಲಿದೆ. ಅಲ್ಲಲ್ಲಿ ನೆಟೆ ರೋಗದಿಂದ ತೊಗರಿ ಗಿಡದ ಎಲೆಗಳು ಕೆಂಪಾಗಿ ಬೆಳವಣಿಗೆ ಕುಂಠಿತವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದ ರಮೇಶ ಪಾಟೀಲ ಎಂಬುವವರ ಸುಮಾರು 6 ಎಕರೆ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿದೆ.ತಗ್ಗು ಪ್ರದೇಶದ ಜಮೀನಿನಲ್ಲಿ ಮಳೆ ನೀರು ನಿಂತು ತೊಗರಿ ಎಲೆಗಳು ಹಳದಿಯಾಗಿ ಬೆಳವಣಿಗೆ ಕುಂಠಿತವಾಗುತ್ತಿದೆ.

ತಾಲ್ಲೂಕಿನ ಕೆಲವೆಡೆ ಎರಡು ದಿನಗಳ ಹಿಂದೆ ಹೊಗೆ ಮಂಜಿನಿಂದಾಗಿ ತೊಗರಿ ಕುಡಿಗಳು ಕತ್ತಿರಿಸಿ ಹೋಗಿವೆ. ಹತ್ತಿ ಬೆಳೆ ತಾಮ್ರ ರೋಗಕ್ಕೆ ತುತ್ತಾಗಿದೆ.

ADVERTISEMENT

‘ಮಣ್ಣಿನಲ್ಲಿಯೇ ಹುಳ ಇರುತ್ತದೆ. ಇದು ನೇರವಾಗಿ ಗಿಡದ ಆಹಾರ ನಾಳ ಮತ್ತು ನೀರಿನ ನಾಳವನ್ನು ಕತ್ತರಿಸುತ್ತದೆ. ಹೀಗಾಗಿ ಬೆಳೆಗೆ ನಾವು ಎಷ್ಟೇ ನೀರು, ಗೊಬ್ಬರ ಹಾಕಿದರೂ ಉಪಯೋಗ ಆಗುವುದಿಲ್ಲ. ಮುನ್ನೆಚ್ಚರಿಕೆಯಾಗಿ ರೈತರು ಬೇಸಿಗೆಯಲ್ಲಿ ಟ್ರ್ಯಾಕ್ಟರ್‌ನಿಂದ ಆಳವಾಗಿ ನೇಗಿಲು ಹೊಡೆಯಬೇಕು. ಇದರಿಂದ ತಳದಲ್ಲಿರುವ ಮಣ್ಣು ಮೇಲ್ಭಾಗಕ್ಕೆ ಬಂದು ನೇರವಾಗಿ ಸೂರ್ಯನ ಕಿರಣಗಳಿಗೆ ಸಿಲುಕುತ್ತದೆ. ಇದರಿಂದ ಹುಳಗಳು ನಾಶವಾಗುತ್ತದೆ’ ಎಂದು ನೆಟೆ ರೋಗ ಕುರಿತು ಸಹಾಯಕ ಕೃಷಿ ನಿರ್ದೇಶಕ ಮೊಹ್ಮದ ಖಾಸೀಮ ಹಾಗೂ ತಾಂತ್ರಿಕ ಅಧಿಕಾರಿ ಸರ್ದಾರ ಭಾಷಾ ತಿಳಿಸಿದರು.

‘ಮಳೆ ಹೆಚ್ಚಳ, ಜೌಗು ಸಮಸ್ಯೆಗಳಿಂದ ಎಲೆಗಳು ಹಳದಿಯಾಗುತ್ತವೆ. ಅದಕ್ಕಾಗಿ ರೈತರು ಯೂರಿಯಾವನ್ನು ಮೇಲ್ಗೊಬ್ಬರವಾಗಿ ಸಿಂಪಡನೆ ಮಾಡಬೇಕು.ಪ್ರತಿ ವರ್ಷ ಬೆಳೆ ಬದಲಾವಣೆ ಮಾಡುತ್ತಿರಬೇಕು. ಇದರಿಂದ ರೋಗ ಭಾದೆ ಕಡಿಮೆಯಾಗುವುದಲ್ಲದೆ ಇಳುವರಿಯೂ ಅಧಿಕವಾಗುತ್ತದೆ’ ಎಂದರು.

ರೈತರು ಎರಡು ವರ್ಷಗಳಿಂದ ಅನಾವೃಷ್ಟಿಯಿಂದಾಗಿ ಕಂಗಾಲಾಗಿದ್ದಾರೆ. ರೈತರಿಗೆ ಯಾವುದೇ ಬೆಳೆ ವಿಮೆ ಮಂಜೂರಾಗಿಲ್ಲ ಸಹಕಾರಿ ಸಂಘಗಳ, ವಾಣಿಜ್ಯ ಬ್ಯಾಂಕ್‌ಗಳ ಸಾಲ ಮನ್ನಾ ಅಪೂರ್ಣವಾಗಿದೆ. ಸರ್ಕಾರ ಬೆಳೆ ಹನಿಗೆ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಹಾಗೂ ಸಂಘದ ಸದಸ್ಯ ಬಂದರವಾಡದ ಲಕ್ಷ್ಮಣ ಕಟ್ಟಿಮನಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.