ಆಳಂದ: ತಾಲ್ಲೂಕಿನ ತಲೆಕುಣಿ ಗ್ರಾಮದಲ್ಲಿನ ತೋಟದ ಬಾವಿಗೆ ಬಿದ್ದ ಎಮ್ಮೆಯನ್ನು ರಕ್ಷಿಸಲು ಹೋಗಿ ಕೂಲಿ ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿದ ಘಟನೆ ಭಾನುವಾರ ನಡೆದಿದೆ.
ಶಿವಲಿಂಗಪ್ಪ ಹಣಮಂತ ತಡಕಲೆ (55) ನೀರಿನಲ್ಲಿ ಮುಳುಗಿದವರು. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ರಾತ್ರಿವರೆಗೂ ಪ್ರಯತ್ನಿಸಿದರೂ ಪತ್ತೆಯಾಗಲಿಲ್ಲ.
ಘಟನೆ: ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹೊಲದಲ್ಲಿ ಕಾರ್ಮಿಕ ಶಿವಲಿಂಗಪ್ಪ ಅವರ ಪತ್ನಿ ಎಮ್ಮೆ ಮೇಯಿಸಲು ಹೋಗಿದ್ದರು. ಈ ವೇಳೆ ಎಮ್ಮೆ ನೀರು ಕುಡಿಯಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದಿದೆ. ಹೊರಬರದೆ ಇದ್ದಾಗ ಪತ್ನಿ ಕೆಲಸಕ್ಕೆ ಹೋಗಿದ್ದ ಪತಿಗೆ ಕರೆ ಮಾಡಿ ಕರೆಯಿಸಿದ್ದಾರೆ.
ಬಾವಿಯಲ್ಲಿ ಬಿದ್ದ ಎಮ್ಮೆಯನ್ನು ರಕ್ಷಿಸಲು ನೀರಿಗೆ ಹಾರಿದ ಶಿವಲಿಂಗಪ್ಪ ಮುಳುಗಿದ್ದಾರೆ. ಗಾಬರಿಗೊಂಡ ಪತ್ನಿ ಸುತ್ತಲಿನ ರೈತರು, ಗ್ರಾಮಸ್ಥರ ಗಮನಕ್ಕೆ ತಂದಾಗ ಜನರು ಜಮಾಯಿಸಿದ್ದಾರೆ. ಎಮ್ಮೆ ಬಾವಿಯಿಂದ ಹೊರಬಂದಿದೆ. ಆದರೆ, ಕೂಲಿ ಕಾರ್ಮಿಕ ಪತ್ತೆಯಾಗಿಲ್ಲ.
ಗ್ರಾಮಸ್ಥರು ಹಾಗೂ ಆಳಂದ ಅಗ್ನಿಶಾಮಕ ಸಿಬ್ಬಂದಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಜಿಟಿಜಿಟಿ ಮಳೆ ಹಾಗೂ ಕತ್ತಲು ಆವರಿಸಿದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸೋಮವಾರ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಕುಟುಂಬಕ್ಕೆ ಶಿವಲಿಂಗಪ್ಪ ಅವರು ಆಸರೆಯಾಗಿದ್ದರು. ಕೂಲಿ ಕೆಲಸ ಹಾಗೂ ಹೈನುಗಾರಿಕೆ ಮಾಡಿಕೊಂಡು ಬದುಕಿದ್ದ ಅವರು ನೀರು ಪಾಲಾಗಿದ್ದರಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಕುಟುಂಬಸ್ಥರು ಹಾಗೂ ಗ್ರಾಮದ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ.
ಪರಿಹಾರಕ್ಕೆ ಒತ್ತಾಯ: ‘ಶಿವಲಿಂಗಪ್ಪ ತಡಕಲೆ ಅವರ ಕುಟುಂಬಕ್ಕೆ ದೊಡ್ಡ ಆಪತ್ತು ಬಂದಿದೆ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ಅವರಾಗಿದ್ದರು. ಆದ ಕಾರಣ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲಾಧಿಕಾರಿ ಮಾನವೀಯ ದೃಷ್ಟಿಯಿಂದ ₹5 ಲಕ್ಷ ಪರಿಹಾರ ನೀಡಬೇಕು’ ಎಂದು ಗ್ರಾ.ಪಂ ಅಧ್ಯಕ್ಷ ಮಹಿಬೂಬ ಶೇಖ್, ಸದಸ್ಯ ಶಿವರಾಜ ಪೂಜಾರಿ, ಪ್ರಗತಿಪರ ರೈತ ಸುರೇಂದ್ರ ಪಾಟೀಲ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.