ADVERTISEMENT

ಬೆಂಗಳೂರಿಗೆ ಹೋಗುವ ಪ್ರಯಾಣಿಕರ ಪರದಾಟ

ಡಿಸೆಂಬರ್ 7ರಿಂದ ಮುಂಬೈ–ನಾಗರಕೋಯಿಲ್‌ ರೈಲು ಮಾರ್ಗ ಬದಲು

ಮನೋಜ ಕುಮಾರ್ ಗುದ್ದಿ
Published 28 ನವೆಂಬರ್ 2020, 6:07 IST
Last Updated 28 ನವೆಂಬರ್ 2020, 6:07 IST
ಸುಜಾತಾ ಜಂಗಮಶೆಟ್ಟಿ
ಸುಜಾತಾ ಜಂಗಮಶೆಟ್ಟಿ   

ಕಲಬುರ್ಗಿ: ಮುಂಬೈನಿಂದ ಜಿಲ್ಲೆಯ ಮೂಲಕ ಹಾಯ್ದು ಬೆಂಗಳೂರು ತಲುಪಿ ಅಲ್ಲಿಂದ ನಾಗರಕೋಯಿಲ್‌ಗೆ ತೆರಳುತ್ತಿದ್ದ ಮುಂಬೈ–ನಾಗರಕೋಯಿಲ್ ಎಕ್ಸ್‌ಪ್ರೆಸ್ ರೈಲು ಕೋವಿಡ್‌ ಬಳಿಕ ಡಿಸೆಂಬರ್ 7ರಿಂದ ಸೇವೆಯನ್ನು ಪುನರಾರಂಭಿಸುತ್ತಿದೆ. ಆದರೆ, ಬೆಂಗಳೂರಿಗೆ ತೆರಳುವ ಬದಲು ಬೇರೆ ಮಾರ್ಗದ ಮೂಲಕ ತೆರಳುವುದರಿಂದ ಕಲಬುರ್ಗಿ, ಯಾದಗಿರಿ, ರಾಯಚೂರಿನಿಂದ ರಾಜಧಾನಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ನಿರಾಸೆಯಾಗಿದೆ.

ರೈಲ್ವೆ ಇಲಾಖೆಯು ಶುಕ್ರವಾರ ಈ ರೈಲು ಸಂಚಾರದ ವಿವರಗಳನ್ನು ಪ್ರಕಟಿಸಿದ್ದು, ಸಮಯವನ್ನೂ ಬದಲಿಸಿದೆ. ರಾತ್ರಿ ತಡವಾಗಿ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಈ ಭಾಗದ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಅನುಕೂಲವಾಗಿತ್ತು. ಆದರೆ, ಸಮಯ ಬದಲಾಗಿದ್ದು, ಡಿಸೆಂಬರ್ 7ರಿಂದ ರಾತ್ರಿ 10.30ರ ಬದಲು ನಸುಕಿನ 5.38ಕ್ಕೆ ಮುಂಬೈನಿಂದ ಕಲಬುರ್ಗಿಗೆ ಬರಲಿದೆ.

ಯಾದಗಿರಿ, ರಾಯಚೂರು, ಮಂತ್ರಾಲಯಂ ರಸ್ತೆ, ಅಧೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಪೆನುಗೊಂಡ, ಹಿಂದೂ‍ಪುರ, ಗೌರಿಬಿದನೂರ ಮೂಲಕ ಬೆಂಗಳೂರಿನ ಕೆ.ಆರ್.ಪುರಂ ತಲುಪುತ್ತಿತ್ತು. ಬದಲಾದ ಪಟ್ಟಿಯಲ್ಲಿ ರೈಲು ಧರ್ಮಾವರಂನಿಂದ ಕದಿರಿ, ಮದನಪಲ್ಲಿ ರೋಡ್, ಪಾಕಳಾ, ಚಿತ್ತೂರು, ಸೇಲಂ, ನಾಮಕ್ಕಲ್, ತಿರುನಲ್ವೇಲಿ ಮೂಲಕ ನಾಗರಕೋಯಿಲ್ ತಲುಪಲಿದೆ.

ADVERTISEMENT

ರೈಲ್ವೆ ಇಲಾಖೆಯು ಕಲ್ಯಾಣ ಕರ್ನಾಟಕದ ರೈಲ್ವೆ ಬಳಕೆದಾರರ ಅಭಿಪ್ರಾಯವನ್ನೂ ಪಡೆಯದೇ ಮಾರ್ಗ ಬದಲಾವಣೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

‘ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿನಂತಿರುವ ಕಲಬುರ್ಗಿ ಮೂಲಕ ತೆರಳುತ್ತಿದ್ದ ಅತ್ಯಂತ ಹಳೆಯ ರೈಲುಗಳ ಪೈಕಿ ಮುಂಬೈ–ನಾಗರಕೋಯಿಲ್‌ ರೈಲು ಸಹ ಒಂದಾಗಿತ್ತು. ಬಸವ ಎಕ್ಸ್‌ಪ್ರೆಸ್‌ ಬಳಿಕ ಬೆಂಗಳೂರಿಗೆ ತೆರಳುತ್ತಿದ್ದ ಕೊನೆಯ ರೈಲು ಇದಾಗಿತ್ತು. ಇದೀಗ ಬೆಂಗಳೂರಿನ ಬದಲು ಬೇರೆಡೆ ಮಾರ್ಗ ಬದಲಾಯಿಸಿದ್ದು, ಸರಿಯಲ್ಲ. ದೇಶದಾದ್ಯಂತ ಲಾಕ್‌ಡೌನ್‌ ಸಡಿಲಿಸಲಾಗಿದ್ದು, ಅಗ್ಗದ ಸಾರಿಗೆಗಳ ಪೈಕಿ ಒಂದಾದ ರೈಲುಗಳನ್ನು ಇಲಾಖೆ ಶುರು ಮಾಡಬೇಕಿತ್ತು. ಹೆಚ್ಚು ಜನರು ನೆಚ್ಚಿಕೊಂಡಿರುವ ಸೊಲ್ಲಾಪುರ–ಹಾಸನ ರೈಲನ್ನೂ ಇನ್ನೂ
ಶುರು ಮಾಡಿಲ್ಲ. ಇದೀಗ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ನೆಚ್ಚಿಕೊಂಡಿದ್ದ ನಾಗರಕೋಯಿಲ್ ರೈಲನ್ನು ಬದಲಾಯಿಸಿದರೆ ಇಲ್ಲಿನ ಪ್ರಯಾಣಿಕರು ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಸುನೀಲ ಕುಲಕರ್ಣಿ.

ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸಂಸದ ಡಾ.ಉಮೇಶ ಜಾಧವ

‘ರೈಲ್ವೆ ಅಧಿಕಾರಿಗಳು ಏಕಪಕ್ಷೀಯವಾಗಿ ಈ ರೈಲಿನ ಮಾರ್ಗ ಬದಲಾವಣೆ ನಿರ್ಣಯ ಕೈಗೊಂಡಿದ್ದಾರೆ. ಜನಪ್ರತಿನಿಧಿಯನ್ನು ಸಂಪರ್ಕಿಸಬೇಕು ಎಂಬುದನ್ನೂ ಅವರು ಮರೆತಿದ್ದಾರೆ. ಈ ರೈಲು ಮಾರ್ಗ ಬದಲಾವಣೆಯಿಂದಾಗಿ ಸಾಕಷ್ಟು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಹಾಗಾಗಿ, ಡಿಸೆಂಬರ್ 1ರಂದು ನಾನು ಮತ್ತು ಬೀದರ್ ಸಂಸದ ಭಗವಂತ ಖೂಬಾ ಅವರು ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಿ ಬೆಂಗಳೂರು ಮೂಲಕವೇ ರೈಲು ಸಂಚರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ’ ಎಂದು ಸಂಸದ ಡಾ. ಉಮೇಶ ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.