ADVERTISEMENT

ಹಾಸನ ರೈಲು ಕಲಬುರ್ಗಿಯಿಂದ ಓಡಿಸಿ: ಸುನಿಲ ಕುಲಕರ್ಣಿ

ಜೋಡಿಮಾರ್ಗ ಕಾಮಗಾರಿ; 10 ದಿನಗಳವರೆಗೆ ಹಾಸನ–ಸೊಲ್ಲಾಪುರ ರೈಲು ರದ್ದು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:21 IST
Last Updated 13 ಫೆಬ್ರುವರಿ 2020, 9:21 IST
ಸುನಿಲ ಕುಲಕರ್ಣಿ
ಸುನಿಲ ಕುಲಕರ್ಣಿ   

ಕಲಬುರ್ಗಿ: ಮಧ್ಯ ರೈಲ್ವೆಯು ಸೊಲ್ಲಾ‍ಪುರ ವಿಭಾಗದಲ್ಲಿ ಬರುವ ಬೊರುಟಿ–ದುಧನಿ–ಕುಲಾಲಿ ಮಧ್ಯೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಫೆ 17ರಿಂದ 26ರವರೆಗೂ ಬಹುಬೇಡಿಕೆಯ ‘ಸೊಲ್ಲಾಪುರ–ಹಾಸನ ಎಕ್ಸ್‌ಪ್ರೆಸ್‌’ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ಈ ಅವಧಿಯಲ್ಲಿ ರದ್ದುಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಸೊಲ್ಲಾ‍ಪುರ–ಕಲಬುರ್ಗಿ ಮಧ್ಯದಲ್ಲಿ ಜೋಡಿ ಮಾರ್ಗ ನಡೆಯುತ್ತಿದೆಯೇ ಹೊರತು ಕಲಬುರ್ಗಿ–ಹಾಸನ ಮಧ್ಯೆ ಯಾವುದೇ ಕಾಮಗಾರಿ ಇಲ್ಲ. ಹೀಗಿರುವಾಗ ಸೊಲ್ಲಾಪುರ ಬದಲು ಕಲಬುರ್ಗಿಯಿಂದಲೇ ಈ ರೈಲನ್ನು ಓಡಿಸಬೇಕು ಎಂದು ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಹೋರಾಟ ಸಮಿತಿಯವರು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಇದರಿಂದ ರೈಲ್ವೆಗೂ ಎಷ್ಟು ನಷ್ಟವಾಗಲಿದೆ ಎಂಬುದನ್ನು ಅಂದಾಜು ಮಾಡಿದ್ದಾರೆ.

‘ಕಲಬುರ್ಗಿ ಭಾಗದ ಜನತೆ ವಿವಿಧ ಕಾರ್ಯಗಳಿಗಾಗಿ ಬೆಂಗಳೂರಿಗೆ ತೆರಳಲು ಸೊಲ್ಲಾ‍ಪುರ–ಹಾಸನ ರಸ್ತೆ ಅತ್ಯಂತ ಪ್ರಶಸ್ತವಾಗಿದೆ. ಇದೇ ರೈಲನ್ನೇ ಉದ್ಯಮಿಗಳು, ಜನಸಾಮಾನ್ಯರು ಬಳಸುತ್ತಾರೆ. ರಾತ್ರಿ ಇಲ್ಲಿಂದ ಹೊರಟು ಬೆಳಿಗ್ಗೆ ಬೆಂಗಳೂರು ತಲುಪಲಿರುವ ಈ ರೈಲನ್ನು ಸಾವಿರಾರು ಜನರು ನಿತ್ಯ ಆಶ್ರಯಿಸಿದ್ದಾರೆ. ಕಡಿಮೆ ದರದಲ್ಲಿ ಜನರಲ್‌ ಬೋಗಿಗಳಲ್ಲಿ ತೆರಳುವ ಬಡವರೂ ಇದ್ದಾರೆ. ಸೊಲ್ಲಾ‍ಪುರ–ಕಲಬುರ್ಗಿ ಮಧ್ಯೆ ಜೋಡಿ ಮಾರ್ಗ ನಿರ್ಮಾಣವಾಗುತ್ತಿದೆ. ಆ ಭಾಗವನ್ನು ಹೊರತುಪಡಿಸಿ ರೈಲನ್ನು ಕಲಬುರ್ಗಿಯಿಂದಲೇ ಓಡಿಸಲು ಮಧ್ಯ ರೈಲ್ವೆಗೆ ಏನಡ್ಡಿ’ ಎಂದು ಪ್ರಶ್ನಿಸುತ್ತಾರೆ ಸಮಿತಿ ಸಂಚಾಲಕ ಸುನಿಲ ಕುಲಕರ್ಣಿ.

ADVERTISEMENT

‘ಬೆಳಿಗ್ಗೆ ಬರುವ ರೈಲನ್ನು ಸಂಜೆಯವರೆಗೂ ನಿಲ್ಲಿಸಲು ಕಲಬುರ್ಗಿ ನಿಲ್ದಾಣದಲ್ಲಿ ಪಿಟ್‌ಲೈನ್‌ ಇದೆ. ಹಾಗಾಗಿ, ಇದರಿಂದ ಉಳಿದ ರೈಲುಗಳಿಗೆ ಯಾವುದೇ ತೊಂದರೆಯಾಗದು. ಈ ರೈಲು 10 ದಿನಗಳ ಅವಧಿಯಲ್ಲಿ ಸಂಚರಿಸದಿದ್ದರೆ ₹ 1.5 ಕೋಟಿಯವರೆಗೂ ನಷ್ಟವಾಗಲಿದೆ. ಇತ್ತ ಜನಸಾಮಾನ್ಯರೂ ಅನಿವಾರ್ಯವಾಗಿ ಎರಡರಿಂದ ಮೂರು ಪಟ್ಟು ದರ ತೆತ್ತು ಬಸ್‌ಗಳಿಗೆ ಪ್ರಯಾಣಿಸಬೇಕಿದೆ’ ಎನ್ನುತ್ತಾರೆ ಸುನಿಲ.

ಹಾಸನದಿಂದ ಸೊಲ್ಲಾಪುರದವರೆಗೆ ಏಕಮುಖ ಸಂಚಾರ ಕೈಗೊಂಡರೆ ₹ 7 ಲಕ್ಷ ವರಮಾನ ಬರುತ್ತದೆ. 24 ಬೋಗಿಗಳುಳ್ಳ ದೊಡ್ಡ ರೈಲು ಇದಾಗಿದ್ದು, ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ರೈಲಿನ ಮೂಲಕ ಪ್ರಯಾಣ ಕೈಗೊಳ್ಳುತ್ತಾರೆ. ಅದರಲ್ಲಿಯೂ ಬಹುತೇಕರು ಕಲಬುರ್ಗಿಯಿಂದಲೇ ಹತ್ತುತ್ತಾರೆ. ಹೀಗಾಗಿ, ಈ ರೈಲನ್ನು 10 ದಿನಗಳವರೆಗೆ ರದ್ದು ಮಾಡುವ ಬದಲು ಕಲಬುರ್ಗಿಯಿಂದಲೇ ಓಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.