ADVERTISEMENT

ವಿದ್ಯುತ್ ಕಂಬಗಳಿಗೆ ಹಬ್ಬಿದ ಬಳ್ಳಿ

ಅಪಾಯದ ಭೀತಿಯಲ್ಲಿ ಜನರು, ಜೆಸ್ಕಾಂ ನಿರ್ಲಕ್ಷ್ಯಕ್ಕೆ ಆಕ್ರೋಶ

ಹನಮಂತ ಕೊಪ್ಪದ
Published 16 ಜೂನ್ 2020, 16:18 IST
Last Updated 16 ಜೂನ್ 2020, 16:18 IST
ಬಂಜಾರ ಚೌಕ್ ಹತ್ತಿರದ ಶರಣಬಸವೇಶ್ವರ ಮೀಲ್ ಮುಂಭಾಗದ ವಿದ್ಯುತ್ ಪರಿವರ್ತಕದ ಸುತ್ತ ಬಳ್ಳಿ ಹಬ್ಬಿಕೊಂಡಿರುವುದು
ಬಂಜಾರ ಚೌಕ್ ಹತ್ತಿರದ ಶರಣಬಸವೇಶ್ವರ ಮೀಲ್ ಮುಂಭಾಗದ ವಿದ್ಯುತ್ ಪರಿವರ್ತಕದ ಸುತ್ತ ಬಳ್ಳಿ ಹಬ್ಬಿಕೊಂಡಿರುವುದು   

ಕಲಬುರ್ಗಿ: ನಗರದ ಪ್ರಮುಖ ರಸ್ತೆಗಳ ಸುತ್ತಮುತ್ತ ಮತ್ತು ವಿವಿಧ ವಾರ್ಡ್‌ಗಳಲ್ಲಿರುವ ವಿದ್ಯುತ್ ಪರಿವರ್ತಕ ಮತ್ತು ಕಂಬಗಳಿಗೆ ಗಿಡಗಂಟಿ ಮತ್ತು ಬಳ್ಳಿಗಳು ಹಬ್ಬುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಹಲವು ದಿನಗಳಿಂದ ನಗರದಲ್ಲಿ ಆಗಾಗ ಮಳೆಯಾಗುತ್ತಿದೆ. ಇದರಿಂದಾಗಿ ಜಾಲಿಗಿಡ, ಪಾರ್ಥೇನಿಯಂ ಸೇರಿದಂತೆ ಹಲವು ಕಳೆ ಗಿಡಗಳು ಹುಲುಸಾಗಿ ಬೆಳೆಯುತ್ತಿದ್ದು, ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಆವರಿಸುತ್ತಿವೆ. ಕೆಲವು ಕಡೆ ಮರಗಳ ಕೊಂಬೆಗಳ ಹೊರಚಾಚಿದ್ದು, ತಂತಿ ಸ್ಪರ್ಶಿಸುತ್ತಿವೆ. ಕಂಬಗಳ ಮೇಲೆ ಬೀಳುವ ಮಳೆ ನೀರು ಬಳ್ಳಿ, ಗಿಡಗಳ ಮೂಲಕ ನೆಲದಲ್ಲಿ ಹರಿಯುವದರಿಂದ ವಿದ್ಯುತ್ ಪ್ರವಹಿಸುವ ಸಾಧ್ಯತೆಯಿದೆ. ಇದರಿಂದಾಗಿ ಕಂಬಗಳ ಹತ್ತಿರ ಓಡಾಡುವಾಗ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ಕೆಲವು ಕಾಲೊನಿಗಳಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಸುರಕ್ಷಿತ ಬೇಲಿಯನ್ನೇ ಅಳವಡಿಸಿಲ್ಲ. ಇದರಿಂದಾಗಿ ಅಪ್ಪಿ ತಪ್ಪಿ ಮಕ್ಕಳು ಇವುಗಳ ಕಡೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಕೆಲವು ಕಡೆ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಜಾಲಿಗಿಡಗಳು ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಮರೆಮಾಚಿವೆ. ಅಪಾಯದ ಅರಿವಿರದೆ ಕಂಬಗಳ ಸುತ್ತ ಬೆಳೆದಿರುವ ಸಸ್ಯಗಳನ್ನು ತಿನ್ನಲು ಹೋಗಿ ಜಾನುವಾರುಗಳು ವಿದ್ಯುತ್ ಅವಘಢಕ್ಕೆ ತುತ್ತಾದ ಘಟನೆಗಳು ನಗರದಲ್ಲಿ ನಡೆದಿವೆ. ಅಲ್ಲದೆ ಧಾರಾಕಾರವಾಗಿ ಮಳೆ ಸುರಿದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹಲವು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

ADVERTISEMENT

ಎಲ್ಲೆಲ್ಲಿ?: ನಗರದ ಬಹುತೇಕ ವಾರ್ಡ್‌ಗಳಲ್ಲಿ ಇದೇ ಪರಿಸ್ಥಿತಿಯಿದೆ. ರಿಂಗ್ ರಸ್ತೆ, ತಾಜ್‌ಸುಲ್ತಾನ್‌ಪುರ ರಸ್ತೆ, ಹಳೆ ಜೇವರ್ಗಿ ರಸ್ತೆ, ಐವಾನ್‌ಶಾಹಿ ರಸ್ತೆ, ಎಸ್‌ಟಿಬಿಟಿ ದರ್ಗಾ ರಸ್ತೆಗಳ ಸುತ್ತಮುತ್ತ ಇರುವ ವಿದ್ಯುತ್ ಪರಿವರ್ತಕಗಳ ಸುತ್ತ ಬಳ್ಳಿಗಳು ಹಬ್ಬಿಕೊಂಡಿವೆ. ಮಹಾತ್ಮ ಗಾಂಧಿ ಆಟೊನಗರ, ಚನ್ನವೀರ ನಗರ, ಶಿವಶಕ್ತಿ ನಗರ, ಕಮಲ ನಗರ, ಬಂಜಾರ್ ಚೌಕ್, ಫಿಲ್ಟರ್‌ಬೆಡ್, ಜಿಡಿಎ ಕಾಲೊನಿ, ಸುಂದರನಗರ, ದೇವನಗರ, ಸದಾಶಿವನಗರ ಸೇರಿದಂತೆ ವಿವಿಧ ಕಾಲೊನಿಗಳಲ್ಲಿರುವ ಕಂಬ ಮತ್ತು ವಿದ್ಯುತ್ ಪರಿವರ್ತಕಗಳ ಸುತ್ತ ಬಳ್ಳಿ ಹಬ್ಬಿಕೊಂಡಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.

‘ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕಗಳ ಸುತ್ತ ಬೆಳೆದಿರುವ ಕಳೆಗಳನ್ನು ಪೂರ್ತಿಯಾಗಿ ತೆಗೆಯುವುದಿಲ್ಲ. ಇದರಿಂದಾಗಿ ಅವು ಮತ್ತೆ ಮತ್ತೆ ಬೆಳೆದು ಸಮಸ್ಯೆ ಉಂಟು ಮಾಡುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ’ ಎನ್ನುತ್ತಾರೆ ಸದಾಶಿವನಗರದ ನಿವಾಸಿ ಮಹಾಂತೇಶ.

‘ವಿದ್ಯುತ್ ಪರಿವರ್ತಕಗಳ ಸುತ್ತಮುತ್ತ ಬೆಳೆದಿರುವ ಕಳೆ ಸಸ್ಯಗಳನ್ನು ಜೆಸ್ಕಾಂನಿಂದ ನಿರಂತರವಾಗಿ ತೆಗೆದು ಹಾಕಲಾಗುತ್ತಿದೆ. ಇಂಥ ದುರಸ್ತಿ ಕಾರ್ಯಕ್ಕೆ ಕನಿಷ್ಟ 2 ಗಂಟೆ ವಿದ್ಯುತ್ ಪೂರೈಕೆ ನಿಲ್ಲಿಸಬೇಕಾಗುತ್ತದೆ. ಸಾರ್ವಜನಿಕರು ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ಖಂಡೆಪ್ಪ ಸೋನವಾಡಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.