ADVERTISEMENT

ಕಲಬುರ್ಗಿಯಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ

ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿಮಿಟೆಡ್‌ನ ಅಧ್ಯಕ್ಷ ಡಿ.ಎಸ್‌.ವೀರಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 16:00 IST
Last Updated 6 ಮಾರ್ಚ್ 2021, 16:00 IST
ಡಿ.ಎಸ್‌.ವೀರಯ್ಯ
ಡಿ.ಎಸ್‌.ವೀರಯ್ಯ   

ಕಲಬುರ್ಗಿ: ‘ಜಿಲ್ಲೆಯಲ್ಲಿ ಹೊಸದಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೆಲವು ಕಡೆ ಸ್ಥಳಗಳನ್ನು ಗುರುತಿಸಲಾಗಿದೆ. ಬಜೆಟ್‌ ಅಧಿವೇಶನ ಮುಗಿದ ಬಳಿಕ ಇದರ ಚಟುವಟಿಕೆಗಳು ಬಿರುಸು ಪಡೆಯಲಿವೆ’ ಎಂದು ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿಮಿಟೆಡ್‌ನ ಅಧ್ಯಕ್ಷ ಡಿ.ಎಸ್‌.ವೀರಯ್ಯ ತಿಳಿಸಿದರು.

‘ನಗರದ ರಿಂಗ್‌ ರಸ್ತೆಗೆ ಹೊಂದಿಕೊಂಡು ಈಗಾಗಲೇ ಒಂದು ಟ್ರಕ್‌ ಟರ್ಮಿನಲ್‌ ಇದೆ. ಆದರೆ, ಅದು ಲಾರಿ ಮಾಲೀಕರು– ಚಾಲಕರೇ ಮಾಡಿಕೊಂಡು ಖಾಸಗಿ ಟರ್ಮಿನಲ್‌. ಅವರು ಸರ್ಕಾರಕ್ಕೆ ಒಪ್ಪಿಸಲು ಮುಂದಾದರೆ ಅದನ್ನೂ ಅಭಿವೃದ್ಧಿಪಡಿಸುತ್ತೇವೆ. ಅದಾಗಿಯೂ ಇನ್ನೊಂದು ಟರ್ಮಿನಲ್‌ ಅಗತ್ಯವಾಗಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ 30 ಜಿಲ್ಲೆಗಳಲ್ಲಿಯೂ ಟರ್ಮಿನಲ್‌ ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ ₹ 400 ಕೋಟಿ ಅನುದಾನವನ್ನು ಪ್ರಸಕ್ತ ಬಜೆಟ್‌ನಲ್ಲಿ ನೀಡಬೇಕೆಂದು ಕೇಳಿದ್ದೇವೆ. ಅಷ್ಟು ಸಾಧ್ಯವಾಗದಿದ್ದರೆ ಕನಿಷ್ಠ ₹ 200 ಕೋಟಿ ಕೊಟ್ಟರೂ ನಮ್ಮ ಕೆಲಸ ಶುರು ಮಾಡುತ್ತೇವೆ. ಕಲಬುರ್ಗಿ, ಶಿವಮೊಗ್ಗ, ಹೊಸಪೇಟೆ, ಮಂಗಳೂರು ಮುಂತಾದ ಜಿಲ್ಲೆಗಳನ್ನು ಆದ್ಯತೆ ಮೇಲೆ ಪರಿಗಣಿಸಿದ್ದೇವೆ. ರಿಂಗ್‌ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಈ ಜಿಲ್ಲೆಗಳು ಹೆಚ್ಚು ಸಂಚಾರ ದಟ್ಟಣೆ ಎದುರಿಸುತ್ತಿವೆ. ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಅಂಕಿ–ಅಂಶಗಳ ಆಧಾರದ ಮೇಲೆ ಎಲ್ಲೆಲ್ಲಿ ಆದ್ಯತೆ ಮೇರೆಗೆ ಟರ್ಮಿನಲ್‌ ನಿರ್ಮಿಸಬೇಕು ನಿರ್ಧರಿಸಿದ್ದೇವೆ’ ಎಂದರು.

ADVERTISEMENT

‘ಒಂದು ಟರ್ಮಿನಲ್‌ ನಿರ್ಮಿಸಲು ಕನಿಷ್ಠ ₹ 40 ಕೋಟಿ ಬೇಕು. 50 ಎಕರೆ ಜಮೀನು ಬೇಕು.ಪೆಟ್ರೋಲ್ ಬಂಕ್, ಶೌಚಾಲಯ, ಎಟಿಎಂ, ಪೊಲೀಸ್ ಸ್ಟೇಷನ್, ಸ್ಪೇರ್ ಪಾರ್ಟ್ಸ್‌ ಮಳಿಗೆ, ಔಷಧ ಮಳಿಗೆ, ಕ್ಲಿನಿಕ್, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ಮೂಲಕಸೌಕರ್ಯಗಳನ್ನು ಒದಗಿಸುವ ಮತ್ತು ಹೂಡಿಕೆ ಹಾಗೂ ಆದಾಯಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶಾಲ ಪ್ರದೇಶದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಯೋಚಿಸಲಾಗಿದೆ. ಜಿಲ್ಲಾಡಳಿತ ಜಮೀನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮುಂದಿನ ಹೆಜ್ಜೆ ಇಡಲಾಗುವುದು. ನಿರ್ಮಾಣಕ್ಕೆ ಸರ್ಕಾರಿ ಜಮೀನು ಸಿಕ್ಕರೆ ನಿಗಮಕ್ಕೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಹೀಗಾಗಿ ಸರ್ಕಾರಿ ಜಾಗದಲ್ಲೇ ಟರ್ಮಿನಲ್ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು’ ಎಂದರು.

‘ಪ್ರಜಾಪ್ರಭುತ್ವದ ಆದ್ಯತೆಗಳು, ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತ ಸಾಗಿವೆ. ದಿವಂಗತರಾದ ರಾಮಕೃಷ್ಣ ಹೆಗಡೆ, ದೇವರಾಜ ಅರಸು, ಜೆ.ಎಚ್‌. ಪಟೇಲ್‌ ಅವರಂಥ ನಾಯಕತ್ವವ ನೋಡಲು ಈಗ ಸಾಧ್ಯವಿಲ್ಲ. ಈಗೇನಿದ್ದರೂ ‘ಗೆಲ್ಲುವುದೇ’ ಮೌಲ್ಯ ಎನ್ನುವ ಪದ್ಧತಿ ರೂಢಿಯಲ್ಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಟರ್ಮಿನಲ್‌ ನಿರ್ಮಾಣದ ಕೆಲಸಗಳನ್ನು ಶೀಘ್ರ ಮಾಡಬೇಕು. ಇಲಾಖೆಗಳು ಸಮನ್ವಯದಿಂದ ಇದನ್ನು ಯಶಸ್ವಿಗೊಳಿಸಬೇಕು’ ಎಂದರು.

ಸಭೆಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ‘ಟರ್ಮಿನಲ್ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದಾರಿಗೆ ಹೊಂದಿಕೊಂಡಿರುವ ಕಮಲಾಪುರದ ಬಳಿ 10 ಎಕರೆ ಹಾಗೂ ಕಲಬುರ್ಗಿ– ಶಹಾಬಾದ್‌ ರಸ್ತೆಯ ನಂದೂರ ಬಳಿ 10 ಎಕರೆ ಕೆ.ಐ.ಡಿ.ಬಿ ಜಮೀನು ಇದೆ. ನಿಗಮವು ಟರ್ಮಿನಲ್ ನಿರ್ಮಾಣಕ್ಕೆ ಮುಂದೆ ಬಂದಲ್ಲಿ ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುತ್ತದೆ’ ಎಂದರು.

ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ, ಕಾರ್ಯದರ್ಶಿ ಜಗನ್ನಾಥ ಪಾಟೀಲ, ವಿವಿಧ ತಾಲ್ಲೂಕುಗಳ ತಹಶೀಲ್ದಾರರಾದ ಪ್ರಕಾಶ ಕುದರಿ, ಅಂಜುಮ್‌ ತಬಸ್ಸುಮ್, ಗಂಗಾಧರ ಪಾಟೀಲ, ಕೆ. ಆನಂದಶೀಲ್, ಕೆ.ಐ.ಎ.ಡಿ.ಬಿ ಸಹಾಯಕ ಎಂಜಿನಿಯರ್‌ ಸುಭಾಷ ನಾಯಕ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.