ADVERTISEMENT

ಕಲಬುರಗಿ | ‘ಪ್ರಾಮಾಣಿಕ ಪ್ರಯತ್ನದಿಂದ ಗುರಿ ತಲುಪಿ’

ಸಕ್ರಿಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:23 IST
Last Updated 19 ನವೆಂಬರ್ 2025, 5:23 IST
ಕಲಬುರಗಿಯ ಸೇಂಟ್‌ ಜಾನ್ಸ್‌ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ಡಾ.ಶರಣಬಸಪ್ಪ ಗಣಜಲಖೇಡ್‌, ಡಾ.ಶರಣಬಸಪ್ಪ ಕ್ಯಾತನಾಳ ಹಾಗೂ ಗಣ್ಯರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು
ಕಲಬುರಗಿಯ ಸೇಂಟ್‌ ಜಾನ್ಸ್‌ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ಡಾ.ಶರಣಬಸಪ್ಪ ಗಣಜಲಖೇಡ್‌, ಡಾ.ಶರಣಬಸಪ್ಪ ಕ್ಯಾತನಾಳ ಹಾಗೂ ಗಣ್ಯರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು   

ಕಲಬುರಗಿ: ‘ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕತೆಯರು ಪ್ರಾಮಾಣಿಕ ಪ್ರಯತ್ನದಿಂದ ತಮಗೆ ನೀಡಿದ ಗುರಿ ತಲುಪಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ತಿಳಿಸಿದರು.

ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಕಲಬುರಗಿ ವತಿಯಿಂದ ಆಯೋಜಿಸಿದ್ದ ‘ಸಕ್ರಿಯ ಕ್ಷಯರೋಗ ಹಾಗೂ ಕುಷ್ಠರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮದ ಉದ್ಘಾಟನೆ’ಯಲ್ಲಿ ಅವರು ಮಾತನಾಡಿದರು.

‘ಕ್ಷಯ ಮತ್ತು ಕುಷ್ಠರೋಗಗಳ ನಿರ್ಮೂಲನೆಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸೂಕ್ಷ್ಮತೆ ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಅಲ್ಲದೆ ಸಾರ್ವಜನಿಕರಿಗೆ ಇದರ ಕುರಿತು ಅರಿವು ಮೂಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು.

ADVERTISEMENT

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಿಬೋಳಿ ಮಾತನಾಡಿ, ‘ಕ್ಷಯರೋಗ ಯಾವುದೇ ಶಾಪ ತಾಪಗಳಿಂದ ಬರುವ ರೋಗ ಎಂಬ ಮೂಢನಂಬಿಕೆ ಬೇಡ. ಅದೊಂದು ಬ್ಯಾಕ್ಟೀರಿಯಾದಿಂದ ಬರುವ ಸಾಂಕ್ರಾಮಿಕ ರೋಗ. ಎರಡು ವಾರ ಅಥವಾ  ಅದಕ್ಕಿಂತ ಹೆಚ್ಚು ಸತತವಾದ ಕೆಮ್ಮು, ಜ್ವರ, ಅದರಲ್ಲೂ ಸಂಜೆ ವೇಳೆ ಹೆಚ್ಚಾಗುವುದು. ಕಫದಲ್ಲಿ ರಕ್ತ ಬೀಳುವುದು ಮತ್ತು ತೂಕ ಕಡಿಮೆ ಇರುವುದು ಕ್ಷಯ ರೋಗದ ಲಕ್ಷಣಗಳಾಗಿವೆ’ ಎಂದರು.

‘ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊಳೆಗೇರಿಗಳಲ್ಲಿ ವಾಸಿಸುವ, ಕಾರ್ಖಾನೆ ಮತ್ತು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ವಲಸಿಗರು, ಸಕ್ಕರೆ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟವರು, ಧೂಮಪಾನ ಮತ್ತು ಮದ್ಯ ವ್ಯಸನಿಗಳನ್ನು ‘ರೋಗದ ಗಂಡಾತರದಲ್ಲಿರುವವರು’ ಎಂದು ಗುರುತಿಸಲಾಗುತ್ತಿದೆ. ಅಂತಹವರನ್ನು ಪರಿಕ್ಷೆಗೆ ಒಳಪಡಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇ. 19ರಷ್ಟು ಅಂದರೆ  5,33,522 ಜನರಿಗೆ ಕ್ಷಯರೋಗ ಪರಿಕ್ಷೆ ಮಾಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ 535 ತಂಡಗಳು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಒಬ್ಬರು ಆಶಾ ಅಥವಾ ಅಂಗನವಾಡಿ ಕಾರ್ಯಕರ್ತೆ ಇರುತ್ತಾರೆ’ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗದ ಉಪ ನಿರ್ದೇಶಕರಾದ ಡಾ. ಅಂಬಾರಾಯ ರುದ್ರವಾಡಿ ಮತ್ತು ಡಾ. ಶರಣಬಸಪ್ಪ ಗಣಜಲಖೇಡ ಮಾತನಾಡಿ, ‘ಒಂದು ಸಕ್ರಿಯ ಪ್ರಕರಣ ಪತ್ತೆ ಮಾಡಿದರೆ ಸುಮಾರು 10ರಿಂದ 15 ಜನರ ಪ್ರಾಣ ಉಳಿಸಿದಂತಾಗುತ್ತದೆ. ಹೀಗಾಗಿ ಕ್ಷಯ ರೋಗ ನಿರ್ಮೂಲನೆಗೆ ಪ್ರಕರಣಗಳ ಪತ್ತೆ ಮಾಡಿ ರೋಗ ಹರಡುವುದು ತಪ್ಪಿಸುವುದು ಮುಖ್ಯ ಎಂದರು.

‘ಸಿಬ್ಬಂದಿ ಜನರಿಗೆ ಪರಿಕ್ಷೆ ಮಾಡುವಾಗ ತಮ್ಮ ಆರೋಗ್ಯದ ಕುರಿತು ಎಚ್ಚರಿಕೆವಹಿಸಬೇಕು. ವಿಶೇಷವಾಗಿ ಕಫ ಸಂಗ್ರಹಣೆ ಸಂಧರ್ಭದಲ್ಲಿ ಜಾಗೃತವಾಗಿರಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಾರುತಿರಾವ ಕಾಂಬಳೆ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಕೇಶ ಕಾಂಬ್ಳೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆರು ಉಪಸ್ಥಿತರಿದ್ದರು.

ಸುರೇಶ ದೊಡಮನಿ ನಿರೂಪಿಸಿ, ಸಂತೋಷ ಗುಡ್ಡಳ್ಳಿ ವಂದಿಸಿದರು.

ಜಿಲ್ಲೆಯಲ್ಲಿ ಕ್ಷಯರೋಗ ಹೆಚ್ಚಳ ‘ಕ್ಷಯರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ವಲಸಿಗರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಅನಕ್ಷರತೆ ಮತ್ತು ಸಿಮೇಂಟ್‌ ಕಾರ್ಖಾನೆ ಗಣಿಗಳಲ್ಲಿ ದುಡಿಯುವ ಕಾರ್ಮಿಕರು ಅಧಿಕ. ಹೀಗಾಗಿ ಕ್ಷಯರೋಗ ನಿಯಂತ್ರಣಕ್ಕೆ ಸಿಗುತ್ತಿಲ್ಲ’ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಕಾಂತ ನರಿಬೋಳಿ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.