ADVERTISEMENT

ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 15:23 IST
Last Updated 18 ಮಾರ್ಚ್ 2023, 15:23 IST

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಯಾತನೂರು ಗ್ರಾಮದ ಬಳಿ 2021ರ ಮಾರ್ಚ್ 20ರಂದು ನಡೆದ ಸಂಗಣ್ಣ ಪೊಲೀಸ್ ಪಾಟೀಲ ಎಂಬುವರನ್ನು ಕೊಲೆ ಮಾಡಿದ್ದು ಸಾಬೀತಾಗಿದ್ದರಿಂದ ದೇವಪ್ಪ ಬಿರಾದಾರ ಹಾಗೂ ಮಲ್ಲಿಕಾರ್ಜುನ ಹಡಪದ ಎಂಬುವವರಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹ 20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ದೇವಪ್ಪನ ಚಿಕ್ಕಪ್ಪನಾದ ಚಂದ್ರಕಾಂತ ತನ್ನ ಸಂಬಂಧಿ ಮಲ್ಲೇಶಪ್ಪನ ಮನೆಗೆ ಬಂದು ಹೋಗುತ್ತಿದ್ದ. ಇದನ್ನು ಸಹಿಸದ ದೇವಪ್ಪ ಈ ಬಗ್ಗೆ ತಕರಾರು ಎತ್ತಿದ್ದ. ಆ ಸಂದರ್ಭದಲ್ಲಿದ್ದ ಶಿವಲಿಂಗಪ್ಪ ‍ಪೊಲೀಸ್ ಪಾಟೀಲ ಹಾಗೂ ಮೃತ ಸಂಗಣ್ಣ ಪೊಲೀಸ್ ಪಾಟೀಲ ಅವರು ಮಲ್ಲೇಶಪ್ಪನ ಪರ ವಹಿಸಿಕೊಂಡು ದೇವಪ್ಪನಿಗೆ ಬುದ್ಧಿ ಹೇಳಿದ್ದರು. ಇದರಿಂದ ಕೆರಳಿದ ದೇವಪ್ಪ ತನ್ನ ಸ್ನೇಹಿತನಾದ ಮಲ್ಲಿಕಾರ್ಜುನ ಹಡಪದನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸಂಗಣ್ಣ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

ಮೃತ ಸಂಗಣ್ಣ ಜೇರಟಗಿ ಗ್ರಾಮದಿಂದ ಸ್ವಂತ ಊರು ಯಾತನೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಕಾರನ್ನು ಡಿಕ್ಕಿಪಡಿಸಿದ್ದರು. ಸಂಗಣ್ಣ ಕೆಳಗೆ ಬಿದ್ದಾಗ ಮಲ್ಲಿಕಾರ್ಜುನ ತಲೆಯನ್ನು ಒತ್ತಿ ಹಿಡಿದ ದೇವಪ್ಪ ಕಾರಿನಲ್ಲಿಟ್ಟ ತಲವಾರ್ ತಂದು ಸಂಗಣ್ಣ ಅವರ ಎದೆಗೆ ಇರಿದು ನಂತರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದನ್ನು ತಾವು ನೋಡಿದ್ದಾಗಿ ಸಾಕ್ಷಿಗಳು ನ್ಯಾಯಾಲಯದಲ್ಲಿ ತಿಳಿಸಿದ್ದರು.

ADVERTISEMENT

ಈ ಬಗ್ಗೆ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಇಬ್ಬರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 20 ಸಾವಿರ ದಂಡ ವಿಧಿಸಿದರು.

ದಂಡದ ಮೊತ್ತದಲ್ಲಿ ₹ 25 ಸಾವಿರವನ್ನು ಮೃತ ಸಂಗಣ್ಣ ಅವರ ಪತ್ನಿಗೆ ನೀಡಬೇಕು ಹಾಗೂ ಹೆಚ್ಚಿನ ಪರಿಹಾರಕ್ಕೆ ಜಿಲ್ಲಾ ಕಾನೂನು ಸೇವೆಗಳ ‍ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.