ADVERTISEMENT

ಅಂತರರಾಜ್ಯ ಬೈಕ್‌ ಕಳ್ಳರಿಬ್ಬರ ಬಂಧನ: ₹12.60 ಲಕ್ಷ ಮೌಲ್ಯದ 14 ಬೈಕ್‌ಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:54 IST
Last Updated 20 ಫೆಬ್ರುವರಿ 2026, 5:54 IST
ಕಳ್ಳರಿಂದ ಜಪ್ತಿ ಮಾಡಿಕೊಂಡ ಬೈಕ್‌ಗಳನ್ನು ಕಲಬುರಗಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ವೀಕ್ಷಿಸಿದರು. ಎಸಿಪಿ ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ ನಟರಾಜ ಲಾಡೆ ಇದ್ದಾರೆ
ಕಳ್ಳರಿಂದ ಜಪ್ತಿ ಮಾಡಿಕೊಂಡ ಬೈಕ್‌ಗಳನ್ನು ಕಲಬುರಗಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ವೀಕ್ಷಿಸಿದರು. ಎಸಿಪಿ ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ ನಟರಾಜ ಲಾಡೆ ಇದ್ದಾರೆ   

ಕಲಬುರಗಿ: ದ್ವಿಚಕ್ರ ವಾಹನಗಳನ್ನು ಕದ್ದು ಮಾರುವುದನ್ನು ರೂಢಿಯಾಗಿಸಿಕೊಂಡಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಸಬರ್ಬನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹12.60 ಲಕ್ಷ ಮೌಲ್ಯದ 14 ಬೈಕ್‌–ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

‘ಕಲಬುರಗಿಯ ಮೋಮಿನ್‌ಪುರ ಪ್ರದೇಶದ ಗೋಳಾ ಚೌಕನ ಮಹ್ಮದ್ ನಾಸೀರ್‌ (24) ಹಾಗೂ ಮಹ್ಮದ್ ಆರೀಫ್‌ (19) ಬಂಧಿತರು’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಲಬುರಗಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬೈಕ್‌ವೊಂದು ಕಳವಾದ ಬಗ್ಗೆ ಸಬರ್ಬನ್‌ ಠಾಣೆಯಲ್ಲಿ 2025ರ ಅ.28ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಎಸಿಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ನಟರಾಜ ಲಾಡೆ, ಪಿಎಸ್‌ಐ ಶಶಿಕಲಾ, ಸಿಬ್ಬಂದಿ ವೆಂಕಟರೆಡ್ಡಿ, ಅಶೋಕ, ಮಲ್ಲಿಕಾರ್ಜುನ, ಸುಲ್ತಾನ್‌, ಮಂಜುನಾಥ, ಫಿರೋಜ್‌, ಅನಿಲ ಹಾಗೂ ಹಣಮಂತ ಅವರಿದ್ದ ತಂಡವು ಆರೋಪಿಗಳನ್ನು ಬಂಧಿಸಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.

ADVERTISEMENT

‘ಆರೋಪಿಗಳು ರೂಢಿಗತ ಅಪರಾಧಿಗಳಾಗಿದ್ದಾರೆ. ಆರಂಭದಲ್ಲಿ ಕಲಬುರಗಿಯಲ್ಲಿ ಬೈಕ್‌ ಕಳವು ಆರಂಭಿಸಿದ್ದರು. ಬಳಿಕ ಕಳ್ಳತನದ ವ್ಯಾಪ್ತಿ ವಿಸ್ತರಿಸುತ್ತ ಕಲಬುರಗಿ ಜಿಲ್ಲೆ, ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಗಳಲ್ಲಿ ಪಲ್ಸರ್‌–220 ಸೇರಿದಂತೆ 9 ಬೈಕ್‌ ಹಾಗೂ ಐದು ಸ್ಕೂಟರ್‌ಗಳನ್ನು ಕದಿದ್ದಾರೆ. ಆರೋಪಿಗಳು ಜಂಟಿಯಾಗಿ ಕಳವಿನಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದರು.

‘ಈ ಆರೋಪಿಗಳ ವಿರುದ್ಧ ಕಲಬುರಗಿಯಲ್ಲಿ ಮೂರು, ಸೇಡಂ ಹಾಗೂ ನರೋಣಾ ಠಾಣೆಯಲ್ಲಿ ತಲಾ ಒಂದು, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಒಂದು, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎರಡು ಹಾಗೂ ಹೈದರಾಬಾದ್‌ನಲ್ಲಿ ನಾಲ್ಕು ಬೈಕ್‌ ಕದ್ದಿರುವ ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು ಅಪರಾಧ ಮಾಡಿದ ತಕ್ಷಣ ನಂಬರ್‌ ಪ್ಲೇಟ್‌ ಹಾಗೂ ದಾಖಲೆಗಳು ಇಲ್ಲದೇ ಮಾರಾಟ ಮಾಡುತ್ತಿದ್ದರು. ವಿಶೇಷವಾಗಿ ಗ್ರಾಮೀಣ ಭಾಗದ ರೈತರು ಹಾಗೂ ತರಕಾರಿ ವ್ಯಾಪಾರಿಗಳಿಗೆ ಮಾರುತ್ತಿದ್ದರು’ ಎಂದು ಶರಣಪ್ಪ ಎಸ್‌.ಡಿ. ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸಿಪಿ ಬಸವೇಶ್ವರ ಹೀರಾ, ಇನ್‌ಸ್ಪೆಕ್ಟರ್‌ ನಟರಾಜ ಲಾಡೆ ಹಾಗೂ ಸಿಬ್ಬಂದಿ ಇದ್ದರು.

ಗ್ರಾಹಕರು ದಾಖಲೆ ಇಲ್ಲದ ಹಾಗೂ ನಂಬರ್‌ ಪ್ಲೇಟ್‌ಗಳಿಲ್ಲದ ಕಡಿಮೆ ದುಡ್ಡಿಗೆ ಸಿಗುವ ಯಾವುದೇ ವಾಹನಗಳನ್ನು ಖರೀದಿಸಬಾರದು ಇಲ್ಲದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತೆ
ಶರಣಪ್ಪ ಎಸ್‌.ಡಿ. ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.