ADVERTISEMENT

ಕಲಬುರಗಿ: ಉಮೀದ್‌ ಪೋರ್ಟಲ್‌ನಲ್ಲಿ ಜಿಲ್ಲೆಯ 2,500 ದಾಖಲೆ ಅಪ್‌ಲೋಡ್‌’

ಉಮೀದ್‌ ಪೋರ್ಟಲ್‌ನಲ್ಲಿ ವಕ್ಫ್‌ ಆಸ್ತಿ ದಾಖಲು ಕಾರ್ಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:54 IST
Last Updated 6 ನವೆಂಬರ್ 2025, 5:54 IST
ಕಲಬುರಗಿಯ ಕೆಬಿಎನ್‌ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಉಮೀದ್‌ ಪೋರ್ಟಲ್‌ನಲ್ಲಿ ವಕ್ಫ್‌ ಆಸ್ತಿಗಳ ದಾಖಲೆ ಅಪ್‌ಲೋಡ್‌ ಮಾಡುವ ಕಾರ್ಯಕ್ರಮವನ್ನು ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್‌ ಮುಹಮ್ಮದ್ ಅಲಿ ಅಲ್‌ಹುಸೇನಿ ವೀಕ್ಷಿಸಿದರು
ಕಲಬುರಗಿಯ ಕೆಬಿಎನ್‌ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಉಮೀದ್‌ ಪೋರ್ಟಲ್‌ನಲ್ಲಿ ವಕ್ಫ್‌ ಆಸ್ತಿಗಳ ದಾಖಲೆ ಅಪ್‌ಲೋಡ್‌ ಮಾಡುವ ಕಾರ್ಯಕ್ರಮವನ್ನು ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್‌ ಮುಹಮ್ಮದ್ ಅಲಿ ಅಲ್‌ಹುಸೇನಿ ವೀಕ್ಷಿಸಿದರು   

ಕಲಬುರಗಿ: ‘ಜಿಲ್ಲೆಯಲ್ಲಿ ವಕ್ಫ್‌ಗೆ ಸಂಬಂಧಿಸಿದಂತೆ ಒಟ್ಟು 4,260ರಷ್ಟು ಸಂಸ್ಥೆಗಳಿದ್ದು, ಅವುಗಳಡಿ 6,114ರಷ್ಟು ಸ್ವತ್ತುಗಳಿವೆ. ಕೇಂದ್ರ ಸರ್ಕಾರದ ಉಮೀದ್‌ (ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ) ಪೋರ್ಟಲ್‌ನಲ್ಲಿ ಈ ಆಸ್ತಿಗಳ ದಾಖಲೆಗಳ ಅಪ್‌ಲೋಡ್‌ ಕಾರ್ಯ ಭರದಿಂದ ಸಾಗಿದೆ’ ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಸೈಯದ್‌ ಮುಹಮ್ಮದ್ ಅಲಿ ಅಲ್‌ ಹುಸೇನಿ ಹೇಳಿದರು.

ನಗರದ ಕೆಬಿಎನ್‌ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ‘ಉಮೀದ್‌’ ಪೋರ್ಟಲ್‌ನಲ್ಲಿ ಜಿಲ್ಲೆಯ ವಕ್ಫ್‌ ಆಸ್ತಿಗಳ ವಿವರ ಅಪ್‌ಲೋಡ್‌ ಮಾಡುವ ಕಾರ್ಯವನ್ನು ಬುಧವಾರ ಪರಿಶೀಲಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಉಮೀದ್‌ನಲ್ಲಿ ಮೂರು ಹಂತಗಳಿವೆ. ಪ್ರಾಥಮಿಕ ಹಂತದಲ್ಲಿ ದಾಖಲೆಗಳ ಅಪ್‌ಲೋಡ್‌ ಮಾಡಲಾಗುತ್ತದೆ. ಬಳಿಕ ಅವುಗಳ ಪರಿಶೀಲನೆ ನಡೆಯಲಿದೆ. ಅಂತಿಮವಾಗಿ ಅವುಗಳ ಅನುಮೋದನೆ ನಡೆಯಲಿದೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯಲ್ಲಿರುವ ವಕ್ಫ್‌ ಆಸ್ತಿಗಳ ವಿವರ ಅಪ್‌ಲೋಡ್‌ ಮಾಡಲು ಕೆಬಿಎನ್‌ ವಿವಿ ಸಹಯೋಗ ಪಡೆಯಲಾಗಿದೆ. ವಿವಿಯ 45 ಕಂಪ್ಯೂಟರ್‌ಗಳಲ್ಲಿ ವಕ್ಫ್‌ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರ ನೆರವು ಪಡೆಯಲಾಗಿದೆ. ಹೀಗಾಗಿ ಒಂದೇ ದಿನದಲ್ಲಿ 2,500ರಷ್ಟು ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗಿದೆ’ ಎಂದರು.

‘ರಾಜ್ಯದಲ್ಲಿ ಡಿ.5ರ ತನಕ ಈ ಅಭಿಯಾನದ ನಡೆಯಲಿದ್ದು, ಅದಕ್ಕೂ ಮೊದಲೇ ರಾಜ್ಯದಲ್ಲಿರುವ ಎಲ್ಲ ವಕ್ಫ್‌ ಆಸ್ತಿಗಳ ವಿವರ ಅಪ್‌ಲೋಡ್‌ ಮಾಡುವ ಗುರಿಯಿದೆ. ಬರೀ 400ರಷ್ಟು ವಕ್ಫ್‌ ಸ್ವತ್ತುಗಳನ್ನು ಹೊಂದಿರುವ ವಿಜಯನಗರ ಜಿಲ್ಲೆಯಲ್ಲಿ ಈ ಅಪ್‌ಲೋಡ್‌ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಟ್ಟಾರೆ ಶೇ20ರಿಂದ30ರಷ್ಟು ಗುರಿ ಸಾಧನೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರ ಸರ್ಕಾರವು ಡಿ.5ರೊಳಗೆ ದಾಖಲೆಗಳ ಅಪ್‌ಲೋಡ್‌ಗೆ ಗಡುವು ನೀಡಿದೆ. ಅಪ್‌ಲೋಡ್‌ ಸಮಯದಲ್ಲಿ ಕೆಲವೊಮ್ಮೆ ತಾಂತ್ರಿಕ ತೊಂದರೆಗಳ ಕಾಣಿಸಿವೆ. ಹೀಗಾಗಿ ಅವಧಿ ವಿಸ್ತರಿಸುವಂತೆ ವಕ್ಫ್‌ನಡಿಯ ಸಂಸ್ಥೆಗಳಿಂದ ಆಗ್ರಹ ಕೇಳಿ ಬರುತ್ತಿದೆ. ಆದರೆ, ಗಡುವು ವಿಸ್ತರಿಸುವ ಸಾಧ್ಯತೆ ಕ್ಷೀಣ. ತುಸು ಸಮಯ ಸಿಕ್ಕರೆ ವಕ್ಫ್‌ ಆಸ್ತಿಗಳ ದಾಖಲೆ ಪತ್ರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಪ್‌ಲೋಡ್‌ ಮಾಡಲು ನೆರವಾಗುತ್ತದೆ. ಕಲಬುರಗಿಯಲ್ಲಿ ಕೆಬಿಎನ್‌ ವಿವಿ ಸಹಯೋಗ ಪಡೆದಂತೆಯೇ ಇತರೆಡೆಗೂ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ನೆರವು ಪಡೆದು ನಿಗದಿತ ಗಡುವಿನೊಳಗೆ ದಾಖಲೆಗಳ ಅಪ್‌ಲೋಡ್‌ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಕೆಬಿಎನ್‌ ವಿವಿ ನಿರ್ದೇಶಕ ಮುಸ್ತಫಾ ಅಲ್‌ ಹುಸೇನಿ, ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕ ಹಜರತ್ ಅಲಿ ನದಾಫ್, ಲೆಕ್ಕಪರಿಶೋಧಕ ಪರ್ವೇಜ್‌ ಆಲಂ, ಕೆಬಿಎನ್‌ ವಿವಿ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ, ಸಮ ಉಪಕುಲಪತಿ ಪ್ರೊ.ಅಶಫಾಕ್‌ ಅಹ್ಮದ್‌, ಕುಲಸಚಿವ ಮಿರ್‌ ಮಿಲಾಯತ್‌ ಅಲಿ, ಪ್ರೊ.ಆಜಾಮ್‌, ಪ್ರೊ.ಕಮಲ್, ಪ್ರೊ.ನಿಖತ್‌ ಹಾಜರಿದ್ದರು.

‘ದಾವೆಗಳ ವಿವರವೂ ದಾಖಲು’

ವಕ್ಫ್‌ ಆಸ್ತಿಗಳ ಬಗೆಗೆ ನ್ಯಾಯಾಲಯದಲ್ಲಿ ಕೇಸ್‌ಗಳು ಇದ್ದರೆ ಅಂಥ ದಾವೆಗಳ ವಿವರಗಳನ್ನೂ ಉಮೀದ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು. ಲೆಕ್ಕಪರಿಶೋಧನೆ ವಿವರಗಳನ್ನೂ ದಾಖಲಿಸಲಾಗುತ್ತದೆ. ವಕ್ಫ್‌ ವ್ಯಾಪ್ತಿ ಸಂಸ್ಥೆಯಗಳ ಸಮಿತಿ ಅಧ್ಯಕ್ಷರು ಕಾರ್ಯದರ್ಶಿ ಇಲ್ಲವೇ ಮುತವಲ್ಲಿಗಳು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಿದೆ. ಅವರು ಮಾಡದಿದ್ದರೆ ವಕ್ಫ್‌ ಇಲಾಖೆ ಅಧಿಕಾರಿಗಳು ಮುಂದಾಳತ್ವ ವಹಿಸಿ ಇದನ್ನು ಮಾಡಬೇಕಾಗುತ್ತದೆ’ ಎಂದು ಜಿಲ್ಲಾ ವಕ್ಫ್‌ ಅಧಿಕಾರಿ ಮೊಹಮ್ಮದ್ ಅಬ್ದುಲ್‌ ಮನಾನ್ ತಿಳಿಸಿದರು.